ಕೆಳಕೊಡ್ಲಿ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿ : ಪರಿಶಿಷ್ಟ ಜಾತಿ ಒಕ್ಕೂಟ ಆರೋಪ

30/07/2020

ಸೋಮವಾರಪೇಟೆ ಜು.30 : ಕೊಡ್ಲಿಪೇಟೆ ಸಮೀಪದ ಕೆಳಕೊಡ್ಲಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನ ಜಾಗವನ್ನು ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡಿದ್ದು, ಶವ ಸಂಸ್ಕಾರಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜೆ.ಆರ್. ಪಾಲಾಕ್ಷ ಆರೋಪಿಸಿದ್ದಾರೆ.
ಮುಂದಿನ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಅನೇಕ ದಶಕಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನವನ್ನಾಗಿ ಬಳಕೆ ಮಾಡಲಾಗುತ್ತಿದ್ದು, ಈಗ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಸ್ಮಶಾನ ಜಾಗವನ್ನು ಪರಿಶಿಷ್ಟ ಜಾತಿಗೆ ಮೀಸಲಿರಿಸುವಂತೆ ಕಳೆದ 2016ರಲ್ಲಿಯೇ ತಹಸೀಲ್ದಾರ್, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಈವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಸ್ಮಶಾನಕ್ಕೆ ಜಾಗವನ್ನು ಕಾಯ್ದಿರಿಸುವಂತೆ ಸರ್ಕಾರದ ಆದೇಶವಿದ್ದರೂ ಸಹ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಮುಂದಿನ 15 ದಿನಗಳ ಒಳಗೆ ಸದರಿ ಜಾಗವನ್ನು ಸರ್ವೆ ಮಾಡಿ, ಸ್ಮಶಾನಕ್ಕೆ ಬಿಟ್ಟುಕೊಡದಿದ್ದಲ್ಲಿ ಒಕ್ಕೂಟದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಪಾಲಾಕ್ಷ ಎಚ್ಚರಿಸಿದರು. ಗೋಷ್ಠಿಯಲ್ಲಿ ಒಕ್ಕೂಟದ ತಾಲೂಕು ಕಾರ್ಯದರ್ಶಿ ಜೆ.ಎಲ್. ಜನಾರ್ಧನ್, ಗ್ರಾಮಸ್ಥರಾದ ಚಂದ್ರ, ಒಕ್ಕೂಟದ ಪದಾಧಿಕಾರಿಗಳಾದ ಇಂದ್ರೇಶ್, ನವೀನ್‍ಕುಮಾರ್ ಇದ್ದರು.