ಹಾರಂಗಿ ಅಚ್ಚುಕಟ್ಟು ಕೃಷಿ ಪ್ರದೇಶಕ್ಕೆ ಜು.31ರಿಂದ ನೀರು

30/07/2020

ಮಡಿಕೇರಿ ಜು.30 : ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜು.31ರಿಂದ ಜಲಾಶಯದಿಂದ ನೀರು ಹರಿಸಲು ಸರಕಾರ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ನಾಲೆಗಳಿಗೆ ನೀರನ್ನು ಹರಿಸಲು ತೀರ್ಮಾನಿಸಲಾಗಿದ್ದು, ಶುಕ್ರವಾರ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸುವುದರೊಂದಿಗೆ ರೈತರ ಕೃಷಿ ಚಟುವಟಿಕೆಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೀರು ಹರಿಸಲಿದ್ದಾರೆ.
ಹಾರಂಗಿ ಅಚ್ಚುಕಟ್ಟು ಪ್ರದೇಶದ ಕೊಡಗು, ಹಾಸನ, ಮೈಸೂರು ಜಿಲ್ಲೆಯ 1,34,985 ಎಕರೆ ಕೃಷಿ ಜಮೀನಿನ ಅರೆ ಮುಂಗಾರು ನೀರಾವರಿ ಬೆಳೆಗಳಿಗೆ ಮುಖ್ಯ ನಾಲೆಯಲ್ಲಿ ಹರಿಸಿ ನಂತರ ಕಣಿವೆಯ ಹತ್ತಿರವಿರುವ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ಮೂರು ಜಿಲ್ಲೆಗಳ ರೈತರ ಬೇಸಾಯಕ್ಕೆ ನೀರು ಒದಗಿಸಲಾಗುವುದು ಎಂದು ಕಾರ್ಯಪಾಲಕ ಅಭಿಯಂತರ ರಾಜೇಗೌಡ ತಿಳಿಸಿದ್ದಾರೆ.