ಗ್ರಾ.ಪಂ.ಪಿಡಿಒಗಳು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ : ಜಿ. ಪಂ. ಅಧ್ಯಕ್ಷ ಬಿ.ಎ.ಹರೀಶ್ ಸೂಚನೆ

31/07/2020

ಮಡಿಕೇರಿ ಜು.31 :-ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಜನ ಸಾಮಾನ್ಯರಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಸೂಚಿಸಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ನೀಡುವ ಹಣ ಯಾವುದೇ ಕಾರಣಕ್ಕೂ ದುರುಪಯೋಗ ಮಾಡಬಾರದು ಈ ಬಗ್ಗೆ ಎಚ್ಚರಿಗೆ ವಹಿಸಬೇಕು ಎಂದು ಜಿ.ಪಂ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುಳಾ ಮತ್ತು ಇತರೆ ಸದಸ್ಯರು ಸಲಹೆ ನೀಡಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿನ ಕೆಲ ಪಿಡಿಒಗಳು ಸಾರ್ವಜನಿಕರ ಸಮಸ್ಯೆ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೇ ಅನುದಾನ ದುರುಪಯೋಗವಾಗಿರುವ ಬಗ್ಗೆಯೂ ಸಹ ಸಾರ್ವಜನಿಕರು ದೂರುಗಳನ್ನು ನೀಡುತ್ತಿದ್ದು, ಅಂತಹ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿ.ಪಂ.ಸದಸ್ಯರು ಮನವಿ ಮಾಡಿದರು.
ಈ ಬಗ್ಗೆ ಉತ್ತರಿಸಿದ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿ.ಪಂ ಸಿಇಒ ಅವರಿಗೆ ಸೂಚನೆ ನೀಡಿದರು.
ಜಿ.ಪಂ.ಸದಸ್ಯರಾದ ಕಿರಣ್ ಕಾರ್ಯಪ್ಪ ಅವರು ಮಾತನಾಡಿ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ಕಾರ್ಯಕ್ರಮಗಳು ಮತ್ತಷ್ಟು ತಲುಪುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಆಯುಷ್ ಇಲಾಖೆಯ ಕಾರ್ಯಕ್ರಮಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯ ಪಾತ್ರದ ಬಗ್ಗೆ ಮಾಹಿತಿ ಕೇಳಿದರು. ಇದಕ್ಕುತ್ತರಿಸಿದ ಆಯುμï ಇಲಾಖೆಯ ಅಧಿಕಾರಿ ಡಾ.ರಾಮಚಂದ್ರ ಅವರು ಕೋವಿಡ್-19 ಸಂಬಂಧ ಆಯುರ್ವೇದ ಮತ್ತು ಹೋಮಿಯೋಪತಿ ಔಷದಿಗಳಿದ್ದು ಅದನ್ನು ಅಗತ್ಯವಿರುವವರಿಗೆ ಸರಬರಾಜು ಮಾಡಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು, ಕೋವಿಡ್‍ಗಾಗಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ನೀಡುವಂತೆ ಸಲಹೆ ನೀಡಿದರು.
ಜಿ.ಪಂ.ಸದಸ್ಯರಾದ ಪುಟ್ಟರಾಜು ಅವರು ಲಾಕ್‍ಡೌನ್ ಸಂದರ್ಭದಲ್ಲಿ ಸರ್ಕಾರವು ಘೋಷಿಸಿರುವಂತೆ ಮೆಣಸಿನ ಕಾಯಿ ಬೆಳೆ ಪರಿಹಾರ ಸಂಬಂಧ ಅರ್ಹ ಫಲಾನುಭವಿಗಳಿಗೆ ಪರಿಹಾರ ತಲುಪುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಕೋರಿದರು.
ಜಿ.ಪಂ.ಅಧ್ಯಕ್ಷರು ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಅಗತ್ಯ ಮಾಹಿತಿ ಪಡೆದು ಸರ್ಕಾರವು ಘೋಷಿಸಿರುವ ಪರಿಹಾರ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಕೋರಿದರು. ಅಲ್ಲದೇ ತೋಟಗಾರಿಕಾ ಇಲಾಖೆ ವತಿಯಿಂದ ಗಿಡಗಳ ವಿತರಣೆ ಸಂದರ್ಭ ಜನಪ್ರತಿನಿಧಿಗಳನ್ನು ಆಹ್ವಾನಿಸಿ, ಆ ಮೂಲಕ ಗಿಡಗಳ ವಿತರಣಾ ಕಾರ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿ.ಪಂ ಅಧ್ಯಕ್ಷರು ಮಾಹಿತಿ ಕೇಳಿದರು.
ಇದಕ್ಕುತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿದೇಶಕರಾದ ಅರುಂಧತಿ ಅವರು, ನಾಪೋಕ್ಲು ಮತ್ತು ದೇವಲಾಪುರ ಅಂಗನವಾಢಿಗಳು ಉದ್ಘಾಟನೆಗೊಂಡು ಅದನ್ನು ಇಲಾಖಾ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೇ ಇಲಾಖೆ ಪ್ರಗತಿಯ ಕುರಿತು ಮಾಹಿತಿ ನೀಡಿದರು.
ಈ ಮಧ್ಯೆ ಮಾತನಾಡಿದ ಜಿ.ಪಂ.ಸದಸ್ಯೆ ಚಂದ್ರಕಲಾ ಅವರು ಜಿಲ್ಲೆಗೆ ಕೃಷಿ, ಕೈಗಾರಿಕೆ ತೋಟಗಾರಿಕೆ ಸೇರಿದಂತೆ ಮತ್ತಿತರ ಅಗತ್ಯವಿರುವ ನೂತನ ರೀತಿಯ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿರಬೇಕು ಎಂದು ಅವರು ಸಲಹೆ ನೀಡಿದರು.