ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ : ‘ವಿದ್ಯಾಗಮ’ ನಿರಂತರ ಕಲಿಕಾ ಕಾರ್ಯಕ್ರಮ ಅನುಷ್ಠಾನಕ್ಕೆ ಬಿಇಓ ಪಾಂಡು ಕರೆ

31/07/2020

ಕುಶಾಲನಗರ, ಜು.31 : ದೇಶದಲ್ಲಿ ಸಂಭವಿಸಿರುವ ಕೋವಿಡ್ – 19 ರ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲೆಗಳು ಆರಂಭಗೊಳ್ಳುವವರೆಗೆ ಮಕ್ಕಳು ನಿರಂತರವಾಗಿ ಶಾಲೆಯೊಂದಿಗೆ ಸಂಪರ್ಕ ಹೊಂದಿರಲು ರಾಜ್ಯ ಸರ್ಕಾರ ಆರಂಭಿಸಿರುವ ‘ಮಹತ್ವಾಕಂಕ್ಷೆಯ ‘ವಿದ್ಯಾಗಮ’ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಕರೆ ನೀಡಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ‘ವಿದ್ಯಾಗಮ’ ನಿರಂತರ ಕಲಿಕಾ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಮಕ್ಕಳು ನೆಲೆಸಿರುವ ಸ್ಥಳದಲ್ಲೇ ಅನುಷ್ಠಾನಗೊಳಿಸುವ ಕುರಿತು ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಶಿಕ್ಷಕರು ಮಕ್ಕಳನ್ನು ನಿರಂತರ ಸಂಪರ್ಕ ದಲ್ಲಿ ಇಟ್ಟುಕೊಂಡು ಶಾಲೆಯ ಹೊರಭಾಗದಲ್ಲಿ ಮಕ್ಕಳು ನೆಲೆಸಿರುವ ಸ್ಥಳ/ಮನೆ, ಇತರೆ ಸ್ಥಳಗಳಲ್ಲಿ ಪ್ರೌಢಶಾಲಾ 8,9 ಮತ್ತು 10 ನೇ ತರಗತಿಯ 20-25 ಮಕ್ಕಳನ್ನು ವಿವಿಧ ಗುಂಪುಗಳನ್ನು ರಚನೆ ಮಾಡಿಕೊಂಡು ಮಾರ್ಗದರ್ಶಿ ಶಿಕ್ಷಕರು ಮಕ್ಕಳನ್ನು ಒಂದೆಡೆ ಸೇರಿಸಿಕೊಂಡು ಅವರಿಗೆ ಕಲಿಕಾ ಸಾಮಾಗ್ರಿಗಳನ್ನು ಬಳಸಿಕೊಂಡು ಕಲಿಕೆಯನ್ನು ಉತ್ತಮಪಡಿಸಲು ವಿಶೇಷ ಆಸಕ್ತಿ ವಹಿಸಲು ಮುಖ್ಯ ಶಿಕ್ಷಕರು ಕ್ರಮವಹಿಸಬೇಕು ಎಂದು ಬಿಇಓ ಪಾಂಡು ತಿಳಿಸಿದರು.
ಈಗಾಗಲೇ ದೂರದರ್ಶನ ಚಂದನವಾಹಿನಿಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಪಠ್ಯಬೋಧನೆ ಆರಂಭವಾಗಿದೆ. ಜತೆಗೆ ವಿದ್ಯಾಗಮ ಕಾರ್ಯಕ್ರಮದ ಅನುಷ್ಠಾನಕ್ಕೆ ವಿವಿಧ ಹಂತದ ಅಂಶಗಳ ಕಾಲ್ಪನಿಕ ಆಧಾರಿತ ಬೋಧನೆ, ಕಲಿಕಾ ಸಾಮಾಗ್ರಿ, ಆಡಿಯೋ, ವಿಡಿಯೋ ಸಿದ್ಧತೆ ಮೂಲಕ ಮಕ್ಕಳನ್ನು ನಿರಂತರ ಸಂಪರ್ಕದಲ್ಲಿಟ್ಟುಕೊಂಡು ಸ್ವಯಂ ಕಲಿಕೆಗೆ ವಿಶೇಷ ಒತ್ತು ನೀಡಬೇಕು ಎಂದರು.
ಕಾಲ್ಪನಿಕ ಕೊಠಡಿ : ತನ್ನ ಶಾಲೆಗಳಲ್ಲಿನ ಮಕ್ಕಳು ಅವರ ವಾಸಸ್ಥಳಕ್ಕನುಗುಣವಾಗಿ 3 ಭಾಗಗಳಾಗಿ 1-5 ನೇ ತರಗತಿ, 6-8 ನೇ ತರಗತಿ ಹಾಗೂ 8-10 ನೇ ತರಗತಿಗಳನ್ನು ಗುಂಪುಗಳ ಮೂಲಕ ಕೊಂಡು ಮಕ್ಕಳ ಮನೆ ಬಳಿ ಕಾಲ್ಪನಿಕ ಕೊಠಡಿಗಳಾಗಿ ಮಾಡಿಕೊಂಡು ಮಾರ್ಗದರ್ಶಿ ಶಿಕ್ಷಕರು ಆಯಾ ಗುಂಪುಗಳಿಗೆ ಇಲಾಖೆ ನಿಗದಿಪಡಿಸಿದ ಪಠ್ಯಪುಸ್ತಕಗಳನ್ನು ಕಲಿಕಾ ಸಾಮಾಗ್ರಿಗಳನ್ನಾಗಿಸಿಕೊಂಡು ಮಕ್ಕಳಿಗೆ ವಿವರವಾದ ಶೈಕ್ಷಣಿಕ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಕ್ರಮಕೈಗೊಳ್ಳಬೇಕು ಎಂದರು.
ಮಕ್ಕಳ ಸೌಲಭ್ಯ ಮತ್ತು ಕಲಿಕಾ ಸಾಮರ್ಥ್ಯ ಕ್ಕನುಗುಣವಾಗಿ ಶಿಕ್ಷಕರು ಶಾಲಾ ತರಗತಿಯನ್ನು ಹೊರತುಪಡಿಸಿ ಇಂಟಲಿಜೆಂಟ್, ಬ್ರಿಲಿಯಂಟ್ ಹಾಗೂ ಜೀನಿಯಸ್ ಎಂಬ 3 ಕಾಲ್ಪನಿಕ ಕೊಠಡಿಗಳ ಮೂಲಕ ಮಕ್ಕಳಿಗೆ ಕಲಿಕೆಗೆ ಪ್ರೇರೇಪಣೆ ನೀಡುವುದು. ಶಿಕ್ಷಕರು ಈ ಕಾಲ್ಪನಿಕ ತರಗತಿಗಳಲ್ಲಿ ಮಕ್ಕಳಿಗೆ ಇಂಟರ್ ನೆಟ್, ಝೂಮ್, ವೆಬ್ ಎಕ್ಸ್, ಗೂಗಲ್ ಮೀಟ್, ವಾಟ್ಸ್ ಅಪ್ ಕಂಪ್ಯೂಟರ್ ಆನ್ ಲೈನ್ ಮೂಲಕ (ಇಂಟಲಿಜೆಂಟ್ ಗುಂಪು), ಇಂಟರ್ ನೆಟ್ ಇಲ್ಲದೆ ಫೋನ್, ವಾಯ್ಸ್ ಮೆಸೇಜ್ ( ಬ್ರಿಲಿಯಂಟ್ ಗುಂಪು) ಹಾಗೂ ಇಂಟರ್ ನೆಟ್ ಇಲ್ಲದೆ ಮಕ್ಕಳನ್ನು ಭೇಟಿ ಮಾಡಿ ಕಾರ್ಯಯೋಜನೆ ( ಜೀನಿಯಸ್ ಗುಂಪು) ನೀಡಿದ ನಿಯೋಜಿತ ಮನೆ ಕೆಲಸ, ಪ್ರಾಜೆಕ್ಟ್ ವರ್ಕ್, ವಿಜ್ಞಾನ ಚಟುವಟಿಕೆಗಳು ಇನ್ನಿತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ನಿರಂತರ ಸಂಪರ್ಕದಲ್ಲಿಟ್ಟುಕೊಂಡು ಅವರ ಕಲಿಕಾ ಖಾತ್ರಿಯನ್ನು ಉತ್ತಮಪಡಿಸಲು ಶಿಕ್ಷಕರು ಕಾರ್ಯೋನ್ಮುಖರಾಗಬೇಕು ಎಂಡು ಪಾಂಡು ಹೇಳಿದರು.
ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದ ಅನುಷ್ಠಾನಕ್ಕೆ ಶಾಲಾ ಆಡಳಿತ ಮಂಡಳಿ, ಎಸ್.ಡಿ.ಎಂ.ಸಿ., ಹಳೇ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯ ಸಮುದಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಾಲೆಯಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸುವ ಮೂಲಕ ವಿದ್ಯಾಗಮ ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಬಿಇಓ ಗೆ ಸನ್ಮಾನ :
ಕೊವಿಡ್ -19 ರ ನಡುವೆಯೂ ತಾಲ್ಲೂಕಿನಲ್ಲಿ ಜೂನ್/ ಜುಲೈನಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕಾರಣರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಅವರನ್ನು ಬಿ.ಇ.ಓ.ಕಛೇರಿ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.

ಕಾಲೇಜಿನ ಉಪ ಪ್ರಾಂಶುಪಾಲರಾದ ಬಿ.ಬಿ.ಸಾವಿತ್ರಿ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ.ಧರ್ಮಪ್ಪ, ಬಿ ಆರ್ ಸಿ ಶಶಿಧರ್, ಇಸಿಓಗಳಾದ ಕೆ.ಬಿ.ರಾಧಾಕೃಷ್ಣ, ಎಸ್.ಆರ್.ಶಿವಲಿಂಗ,, ಬಿಆರ್ ಪಿ ಗಳಾದ ಎಸ್. ಎನ್. ಲೋಕೇಶ್, ವಿಜಯ್ ಕುಮಾರ್, ಮಮತ, ಸಿಆರ್ ಪಿಗಳಾದ ಸಂತೋಷ್ ಕುಮಾರ್, ಬಿ.ಎನ್. ವಸಂತಕುಮಾರ್, ಚಿಣ್ಣಪ್ಪ, ಗಿರೀಶ್, ಮನೋಹರ್, ಸೀಮಾ ಇತರರು ಇದ್ದರು. ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್ ನಿರ್ವಹಿಸಿದರು. ಆಲೂರು ಸಿದ್ದಾಪುರ ಪ್ರೌಢಶಾಲಾ ಪ್ರಭಾರಿ ಮುಖ್ಯ ಶಿಕ್ಷಕಿ ಶೃತಿ ಪ್ರಾರ್ಥಿಸಿದರು.