ಜಿಲ್ಲಾಧಿಕಾರಿಗಳಿಂದ ಸಾಧಕ ವಿದ್ಯಾರ್ಥಿನಿ ಟಿ.ಕೆ.ಭವಾನಿಗೆ ಅಭಿನಂದನೆ

31/07/2020

ಮಡಿಕೇರಿ ಜು.31 : ಕಡು ಬಡತನದ ನಡುವೆ ಪಿಯುಸಿ ಪರೀಕ್ಷೆಯಲ್ಲಿ ಶೇ.86 ರಷ್ಟು ಅಂಕ ಗಳಿಸಿರುವ ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಗ್ರಾಮದ ವಿದ್ಯಾರ್ಥಿನಿ ಟಿ.ಕೆ.ಭವಾನಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಶುಭ ಹಾರೈಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಅವರು ವಿದ್ಯಾರ್ಥಿನಿಯೊಂದಿಗೆ ಮಾತುಕತೆ ನಡೆಸಿದರು.
ಕಷ್ಟಪಟ್ಟು ಓದಿದ್ದರ ಪ್ರತಿಫಲವಾಗಿ ಉತ್ತಮ ಅಂಕ ಗಳಿಸಿದ್ದೀರಿ. ಪತ್ರಿಕೆಗಳ ಮೂಲಕ ಮಾಹಿತಿ ತಿಳಿದುಬಂತು. ಉನ್ನತ ವಿದ್ಯಾಭ್ಯಾಸ ಮಾಡಿ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿದ್ಯಾರ್ಥಿನಿಗೆ ಸಲಹೆ ಮಾಡಿದರು.
ಇದೇ ವೇಳೆ ಮಡಿಕೇರಿ ರೋಟರಿ ಮಿಸ್ಟ್ರಿ ಹಿಲ್ಸ್ ವತಿಯಿಂದ ವಿದ್ಯಾರ್ಥಿನಿ ಟಿ.ಕೆ.ಭವಾನಿ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂ. ಮತ್ತು ಒಂದು ಸೋಲಾರ್ ಲ್ಯಾಂಪ್ ನ್ನು ಕೊಡುಗೆಯಾಗಿ ನೀಡಲಾಯಿತು.
ಇದೇ ಸಂದರ್ಭ ಜಿಲ್ಲಾಧಿಕಾರಿ ಅವರಿಗೆ ವಿದ್ಯಾರ್ಥಿನಿ ಮನವಿ ಪತ್ರ ಸಲ್ಲಿಸಿ, ತಮಗೆ ಮನೆ, ಶೌಚಾಲಯ ಇನ್ನಿತರ ಮೂಲ ಸೌಲಭ್ಯ ಕಲ್ಪಿಸುವಂತೆ ಕೋರಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು.
ಆಹಾರ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಭವಾನಿ ಕುಟುಂಬಕ್ಕೆ ಪಡಿತರ ಚೀಟಿ ಮತ್ತು ಗ್ಯಾಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ವಹಿಸಲು ನಿರ್ದೇಶನ ನೀಡಿದರು. ವಿದ್ಯಾರ್ಥಿನಿಗೆ ಮನೆ ನಿರ್ಮಾಣ ಮಾಡಲು ಅಗತ್ಯ ದಾಖಾಲಾತಿಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ, ರೋಟರಿ ಮಿಸ್ಟ್ರಿ ಹಿಲ್ಸ್ ನ ಅಧ್ಯಕ್ಷರಾದ ಪಿ.ಎಂ.ಸಂದೀಪ್, ಕಾರ್ಯದರ್ಶಿ ಸತೀಶ್ ಸೋಮಣ್ಣ, ಯೋಜನಾ ನಿರ್ದೇಶಕರಾದ ಎಂ.ಎ.ಪೆÇನ್ನಪ್ಪ, ವಲಯ ಸಾರ್ವಜನಿಕ ಸಂಪರ್ಕ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ, ವಾಮನ ಮೂರ್ತಿ ಇತರರು ಇದ್ದರು.