ಒಂದೇ ದಿನ 50 ಮಂದಿಯಲ್ಲಿ ಸೋಂಕು ದೃಢ : ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 449ಕ್ಕೆ ಏರಿಕೆ

31/07/2020

ಮಡಿಕೇರಿ ಜು.31 : ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 449ಕ್ಕೆ ಏರಿಕೆಯಾಗಿದ್ದು, 301 ಮಂದಿ ಗುಣಮುಖರಾಗಿದ್ದಾರೆ. 139 ಸಕ್ರಿಯ ಪ್ರಕರಣಗಳಿದ್ದು, 9 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 111 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ ಮತ್ತೆ 15 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಒಂದೇ ದಿನ ದಾಖಲೆಯ 50 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆ 9, ಮಧ್ಯಾಹ್ನ 26 ಹಾಗೂ ಸಂಜೆ 15 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇದು ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ.
ಶುಕ್ರವಾರ ಸಂಜೆ ವೀರಾಜಪೇಟೆಯ ಮೊಗರಗಲ್ಲಿಯೊಂದರಲ್ಲೇ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 53 ವರ್ಷ ಪುರುಷ, 49 ವರ್ಷ ಮಹಿಳೆ, 10 ವರ್ಷದ ಬಾಲಕ, 27 ವರ್ಷದ ಪುರುಷ, 55 ವರ್ಷದ ಪುರುಷ, 58 ವರ್ಷದ ಪುರುಷ, 21 ವರ್ಷದ ಪುರುಷ ಮತ್ತು 48 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ವೀರಾಜಪೇಟೆಯ ವಡ್ಡರಮಾಡುವಿನ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 40 ವರ್ಷದ ಪುರುಷ ಮತ್ತು 48 ವರ್ಷದ ಮಹಿಳೆ, ಹಾಸನ ಅರಕಲಗೋಡು ಹುಲಿಕಲ್ ಮೂಲದ ಮಡಿಕೇರಿ ಕೆಎಸ್‍ಆರ್‍ಟಿಸಿ ಡಿಪೋದ 29 ವರ್ಷದ ಪುರುಷ, ಹಾಸನದ ಹೊಳೆನರಸೀಪುರ ಕಡಿವಾಣ ಕೋಟೆಯ ನಿವಾಸಿ ಮಡಿಕೇರಿ ಕೆಎಸ್‍ಆರ್‍ಟಿಸಿ ಡಿಪೋದ 38 ವರ್ಷದ ಪುರುಷ, ವೀರಾಜಪೇಟೆಯ ಬಿರುನಾಣಿ ಗ್ರಾಮದ 54 ವರ್ಷದ ಪುರುಷನಲ್ಲೂ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕು ದೃಢಪಟ್ಟಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆ ಮೂಲಕ ವೀರಾಜಪೇಟೆ ತಾಲೂಕಿನ ಸಿದ್ದಾಪುರ ಎಂ.ಜಿ. ರಸ್ತೆಯ 52 ವರ್ಷದ ಪುರುಷ ಮತ್ತು 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಹೊಸದಾಗಿ ಒಂದು ಕಂಟೈನ್‍ಮೆಂಟ್ ವಲಯವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.