ಮಾಹಿತಿ ಹಕ್ಕು ಕಾಯ್ದೆ ಘಟಕದ ಸದಸ್ಯತ್ವ ಅಭಿಯಾನ ಶೀಘ್ರ ಆರಂಭ : ನೂತನ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅಭಿಮತ

01/08/2020

ಪೊನ್ನಂಪೇಟೆ,ಆ.1: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆ ಘಟಕದ ನೂತನ ಅಧ್ಯಕ್ಷರಾಗಿ ಎಐಸಿಸಿಯಿಂದ ನೇಮಕವಾದ ನಂತರ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ರಾಜ್ಯದ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮತ್ತು ಹಿರಿಯ ವಕೀಲರಾದ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ದಕ್ಷಿಣ ಕೊಡಗಿನ ಗಡಿಭಾಗವಾದ ತಿತಿಮತಿ ಸಮೀಪದ ಆನೆಚೌಕೂರು ಗೇಟ್ ಬಳಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬೆಂಗಳೂರಿನಿಂದ ಹೊರಟ ವಿಷಯ ತಿಳಿದು ಬೆಳಿಗ್ಗೆಯೇ ಗೇಟ್ ಬಳಿ ಜಮಾಯಿಸಿದ ಅಭಿಮಾನಿಗಳು ಮತ್ತು ಹಿತೈಷಿಗಳು ಪೊನ್ನಣ್ಣ ಅವರು ಗಡಿ ತಲುಪುತ್ತಿದ್ದಂತೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು.

ನಂತರ ಸ್ಥಳದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಪೊನ್ನಣ್ಣ ಅವರು, ಕೆಪಿಸಿಸಿ ಮೂಲಕ ತಮಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ಕಾಯ್ದೆ ಘಟಕ ಪಕ್ಷದ ಆಂತರಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ ಮುಂದೆ ರಾಜ್ಯಾಂದ್ಯಂತ ಪ್ರವಾಸ ಮಾಡುವ ಮೂಲಕ ಪ್ರತಿ ಜಿಲ್ಲೆಯಲ್ಲಿ ಘಟಕದ ಸದಸ್ಯತ್ವ ಅಭಿಯಾನ ಆರಂಭಿಸಬೇಕಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಕಳೆದ 20 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಡೆದ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬೇರೆ ಬೇರೆ ಕಾರಣಗಳಿಂದ ಸೋತಿರಬಹುದು. ಅದರರ್ಥ ಪಕ್ಷ ಬಲಹೀನವಾಗಿದೆ ಎಂಬುದಲ್ಲ. ಪ್ರತಿ ಬೂತ್ ಮಟ್ಟದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕೆಲಸ ಮುಂದೆ ಆಗಬೇಕಾಗಿದೆ. ಇದನ್ನು ಭಿನ್ನವಾಗಿ ಮಾಡಲು ಈಗಾಗಲೇ ರಾಜ್ಯ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿದೆ ಎಂದು ಪೊನ್ನಣ್ಣ ಅವರು ಹೇಳಿದರು.

ಈಗಾಗಲೇ ರಾಜ್ಯ ಸರ್ಕಾರ ನಡೆಸಿರುವ ಸಿ.ಇ.ಟಿ. ಪರೀಕ್ಷೆಯನ್ನು ಎನ್.ಎಸ್.ಯು.ಐ.ಘಟಕ ವಿರೋಧಿಸಿದ್ದು, ತಾನೂ ಈ ಬಗ್ಗೆ ರದ್ಧುಪಡಿಸಲು ಒತ್ತಾಯಿಸಿದ್ದೆ. ಆದರೆ, ಸರ್ಕಾರ ಪರೀಕ್ಷೆಯನ್ನು ನಡೆಸಿದೆ. ಸಿ.ಇ.ಟಿ.ಪರೀಕ್ಷೆ ಬರೆಯಲು ಗಡಿನಾಡ ಕನ್ನಡಿಗರು, ಹೊರನಾಡ ಕನ್ನಡಿಗರು ಬರಬೇಕಾಗಿತ್ತು. ರಾಜ್ಯದಲ್ಲಿ ಕೋವಿಡ್-19ರ ನಿಯಂತ್ರಣ ಕ್ರಮಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಕಾರ್ಯಸೂಚಿಯಂತೆ ಹೊರನಾಡ ಕನ್ನಡಿಗರಿಗೆ, ಗಡಿನಾಡಿನ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಹೋಗಿದೆ. ಸಿ.ಇ.ಟಿ. ವರ್ಷಕ್ಕೊಮ್ಮೆ ನಡೆಸುವ ಪರೀಕ್ಷೆ. ಇತರೆ ಪರೀಕ್ಷೆಗಳಂತೆ ಮರು ಪರೀಕ್ಷೆಗೆ ಅವಕಾಶವಿಲ್ಲ. ಹಲವಷ್ಟು ವಿದ್ಯಾರ್ಥಿಗಳು ಕೊರೊನಾ ಭಯದಿಂದ ಬೆಂಗಳೂರಿಗೆ ಬಂದಿಲ್ಲ. ಇದರಿಂದಾಗಿ ಪರೀಕ್ಷೆ ಮುಂದೂಡಲು ತಾನು ಒತ್ತಾಯಿಸಿದ್ದೆ ತಮ್ಮ ವಾದವನ್ನು ಸಮರ್ಥಿಸಿದರು.

ರಾಜ್ಯದಲ್ಲಿ ಕೋವಿಡ್-19 ರ ನೆಪದಲ್ಲಿ ರಾಜ್ಯ ಸರಕಾರ ರೂ.2 ಸಾವಿರ ಕೋಟಿ ಅವ್ಯವಹಾರ ನಡೆಸಿರುವುದು ನಿಜ. ಈ ಕುರಿತ ಎಲ್ಲಾ ಆಧಾರಗಳು ಪಕ್ಷದ ಬಳಿಯಿದೆ. ರಾಜ್ಯ ಸರ್ಕಾರ ರೂ.4 ಸಾವಿರ ಕೋಟಿ ಮೊತ್ತವನ್ನು ರಾಜ್ಯದ ಜನತೆಯ ಆರೋಗ್ಯದ ದೃಷ್ಠಿಯಿಂದ ವ್ಯಯಿಸಲಾಗಿದೆ ಎಂದು ಹೇಳುತ್ತಿದೆ. ಪಿಪಿಇ ಕಿಟ್, ವೆಂಟಿಲೇಟರ್, ಸ್ಯಾನಿಟೈಸರ್, ಕೋವಿಡ್ ಟೆಸ್ಟಿಂಗ್ ಇತ್ಯಾದಿಗಳ ಮುಖ ಬೆಲೆಗೂ ಸರ್ಕಾರ ಪಾವತಿ ಮಾಡಿರುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ವಾಸ್ತವತೆಯನ್ನು ರಾಜ್ಯದ ಜನತೆಗೆ ತಿಳಿಸಬೇಕಾಗಿದೆ. ಅದನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟ ಪೊನ್ನಣ್ಣ ಅವರು, ಈ ಬಗ್ಗೆ ಬಹಳಷ್ಟು ಅಗತ್ಯ ದಾಖಲೆಗಳನ್ನು ವಕೀಲನಾಗಿ ಸಂಗ್ರಹಿಸಿದ್ದೇನೆ ಎಂದು ತಿಳಿಸಿದರು.

ತಮ್ಮ ತಂದೆ ದಿ. ಎ.ಕೆ.ಸುಬ್ಬಯ್ಯ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಆಗಸ್ಟ್ 27 ರಂದು ವಿವಿಧ ಜನೋಪಯೋಗಿ ಯೋಜನೆಗಳೊಂದಿಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಕೋವಿಡ್ -19 ರ ತಲ್ಲಣದಿಂದಾಗಿ ಈ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಆದರೆ ಎ.ಕೆ. ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಮತ್ತೆ ವಿತರಿಸಲು ಸುಮಾರು ರೂ.15 ಲಕ್ಷ ವೆಚ್ಚದಲ್ಲಿ ದಿನಸಿ ಆಹಾರ ಕಿಟ್ ಸಿದ್ದಪಡಿಸಲಾಗಿದೆ. ಈ ಕುರಿತು ಜಿಲ್ಲೆಯ ಕಾಂಗ್ರೆಸ್ ಪ್ರಮುಖರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕಿಟ್ ವಿತರಣೆಯ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಪೊನ್ನಣ್ಣ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಗಡಿಯಲ್ಲಿ ಪೊನ್ನಣ್ಣ ಅವರನ್ನು ಸ್ವಾಗತಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಕೊಲ್ಲೀರ ಬೋಪಣ್ಣ, ಡಿಸಿಸಿ ಸದಸ್ಯರು ಹಾಗೂ ಮಾಜಿ ಎ.ಪಿ.ಎಂ.ಸಿ. ಸದಸ್ಯೆ ಕಡೇಮಾಡ ಕುಸುಮಾ ಜೋಯಪ್ಪ, ಹುದಿಕೇರಿ ಕಾಂಗ್ರೆಸ್ ವಲಯಾಧ್ಯಕ್ಷ, ಎಪಿ.ಎಂ.ಸಿ .ಮಾಜಿ ಸದಸ್ಯ ಎ.ಎಸ್. ನರೇನ್ ಕಾರ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಚೇರಂಡ ಮೋಹನ್, ಬಿ.ಶೆಟ್ಟಿಗೇರಿ ಕಾಂಗ್ರೆಸ್ ವಲಯಾಧ್ಯಕ್ಷ ತೀತಿಮಾಡ ಸದನ್, ಬಿ.ಶೆಟ್ಟಿಗೇರಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಲಯಾಧ್ಯಕ್ಷ ಚಂದೂರ ರೋಹಿತ್, ಹುದಿಕೇರಿ ಕಾಂಗ್ರೆಸ್ ವಲಯ ಪ್ರಧಾನ ಕಾರ್ಯದರ್ಶಿ ಕೇಚಮಾಡ ಶಿವ ನಾಚಪ್ಪ ಮುಂತಾದವರು ಹಾಜರಿದ್ದರು.