ಪೊನ್ನಣ್ಣರಿಂದ ವಡ್ಡರಮಾಡು ಪೈಸಾರಿಯಲ್ಲಿ ದಿನಸಿ ಕಿಟ್ ವಿತರಣೆ

01/08/2020

ಪೊನ್ನಂಪೇಟೆ,ಆ .1: ಎ.ಕೆ. ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಕೆಪಿಸಿಸಿ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆ ಘಟಕದ ಅಧ್ಯಕ್ಷರಾದ, ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರು ನಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಡ್ಡರಮಾಡು ಹಾಡಿ ಪೈಸಾರಿಯ ನಿವಾಸಿಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು. ಕೋವಿಡ್ ನಿರ್ಬಂಧಿತ ಹಾಡಿಯ ಹೊರ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಕಿಟ್ ಗಳನ್ನು ವಿತರಿಸಲಾಯಿತು.

ವಡ್ಡರಮಾಡು ಹಾಡಿಯ 5 ಜನರಿಗೆ ಕೋವಿಡ್-19 ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ನಿರ್ಬಂಧಿತ ವಲಯವನ್ನಾಗಿ ಮಾಡಲಾಗಿದೆ. ಈ ಕಾರಣದಿಂದ ಹೆಚ್ಚಾಗಿ ಕೂಲಿ ಕಾರ್ಮಿಕರಾಗಿರುವ ಇಲ್ಲಿನ ಹಾಡಿ ನಿವಾಸಿಗಳು ಆಹಾರ ಸಾಮಗ್ರಿಗಳಿಗೆ ತೊಂದರೆ ಅನುಭವಿಸುತ್ತಿದ್ದರು. ಈ ವಿಷಯವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಪೊನ್ನಣ್ಣ ಅವರ ಗಮನಕ್ಕೆ ತಂದಾಗ ಇದಕ್ಕೆ ಕೂಡಲೇ ಸ್ಪಂದಿಸಿದ ಅವರು, ಹಾಡಿಯ ಪ್ರತಿ ಸದಸ್ಯರಿಗೂ ಒಂದು ತಿಂಗಳಿಗಾಗುವ‌ಷ್ಟು ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎ.ಎಸ್. ಪೊನ್ನಣ್ಣ ಅವರು, ಸರಕಾರದ ಪ್ರಸ್ತುತ ಮಾರ್ಗಸೂಚಿಯಂತೆ ಕೋವಿಡ್ ನಿರ್ಬಂಧಿತ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಸರ್ಕಾರ ಯಾವುದೆ ಆಹಾರ ಸಾಮಗ್ರಿಗಳನ್ನು ವಿತರಿಸುವುದಿಲ್ಲ. ಇದನ್ನು ಮನಗಂಡು ವಡ್ಡರ ಮಾಡು ಹಾಡಿ ಪೈಸಾರಿಯಲ್ಲಿ ವಾಸಿಸುತ್ತಿರುವ ಬಡಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗಿದೆ. ಅಗತ್ಯವಿದ್ದರೆ ಮುಂದೆಯೂ ಇಲ್ಲಿನ ನಿವಾಸಿಗಳಿಗೆ ದಿನಸಿ ಕೀಟ್ ಗಳನ್ನು ಪೂರೈಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ.ಎನ್.ಪ್ರತ್ಯು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರೀರ ನವೀನ್, ಮಾಜಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಅಜ್ಜಿಕುಟ್ಟಿರ ಎಸ್. ನರೇನ್ ಕಾರ್ಯಪ್ಪ, ನಿಟ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪೋರಂಗಡ ಪವನ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಕಡೇಮಾಡ ಕುಸುಮ ಜೋಯಪ್ಪ, ಕಾಂಗ್ರೆಸ್ ಪ್ರಮುಖರಾದ ಕೇಚಮಾಡ ಶಿವ ನಾಚಪ್ಪ, ಚೇರಂಡ ಮೋಹನ್ ಕುಶಾಲಪ್ಪ, ಚಂದುರ ರೋಹಿತ್ ಪೊನ್ನಪ್ಪ, ತೀತಿರ ಚೊಂದಮ್ಮ ಜಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.