ಆಗಸ್ಟ್ 25 ರಂದು ಶ್ರೀ ವೀರಭದ್ರಸ್ವಾಮಿ ಜಯಂತೋತ್ಸವ

ಮಡಿಕೇರಿ ಆ.2 : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವತಿಯಿಂದ ಶ್ರೀ ವೀರಭದ್ರಸ್ವಾಮಿ ಜಯಂತೋತ್ಸವನ್ನು ಆಗಸ್ಟ್-25 ಮಂಗಳವಾರ ರಾಷ್ಟ್ರಾದ್ಯಂತ ನಡೆಸಲು ನಿರ್ಧರಿಸಿದೆ.
ನಾಡಿನ ಮಠಗಳಲ್ಲಿ ಹಾಗೂ ಶ್ರೀ ವೀರಭದ್ರಸ್ವಾಮಿ ಜನ್ಮತಾಳಿದ ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇರುವುದರಿಂದ ವೀರಶೈವ ಲಿಂಗಾಯತ ಬಹುಸಂಖ್ಯೆಯಲ್ಲಿದ್ದು ಶ್ರೀ ವೀರಭದ್ರಸ್ವಾಮಿ ದೇವರನ್ನು ಮನೆದೇವರಾಗಿ ಆರಾಧಿಸುವುದರಿಂದ ಪ್ರತಿಯೊಬ್ಬರು ಆಗಸ್ಟ್ 25 ರಂದು ಮಂಗಳವಾರ ದಿನ ಶ್ರೀ ವೀರಭದ್ರಸ್ವಾಮಿ ಜಯಂತಿಯನ್ನು ಆಚರಿಸುವಂತೆ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಕರೆ ನೀಡಿದ್ದಾರೆ.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ನಾಡಿನ ಧಾರ್ಮಿಕ ಗುರುಗಳನ್ನು, ವಿವಿಧ ಕ್ಷೇತ್ರಗಳ ಗಣ್ಯಮಾನ್ಯರುಗಳನ್ನು ಸಂಪರ್ಕಿಸಿದ್ದು ಜಯಂತೋತ್ಸವದಲ್ಲಿ ಭಾಗವಹಿಸಲು ಮನವಿ ಮಾಡಿದೆ. ಸಂಘಟನಾ ವೇದಿಕೆಯ ವತಿಯಿಂದ ಜಿಲ್ಲಾ ಮತ್ತು ತಾಲ್ಲೂಕ ಮಟ್ಟಗಳಲ್ಲಿ ಮಠಾಧೀಶ ಸಾನಿಧ್ಯದಲ್ಲಿ ಶ್ರೀ ವೀರಭದ್ರಸ್ವಾಮಿ ಜಯಂತೋತ್ಸವದ ಸಮಾರಂಭವನ್ನು ನಡೆಸಲು ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆಂದರು.
ರಾಷ್ಟ್ರ ಮತ್ತು ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿ ಶ್ರೀ ವೀರಭದ್ರಸ್ವಾಮೀಯ ದೇವಾಲಯಗಳಿದ್ದು ಜಾತ್ರಾ ಮಹೋತ್ಸವ ಜೊತೆಗೆ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯಿರುವುದರಿಂದ ಶ್ರೀ ವೀರಭದ್ರಸ್ವಾಮೀಯ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಏರ್ಪಡಿಸಲು ವೇದಿಕೆ ನಿರ್ಧರಿಸಿದೆಂದರು.