ಕೊಡಗಿನಲ್ಲಿ ಆ.7 ರವರೆಗೆ ಭಾರೀ ಮಳೆ ಸಾಧ್ಯತೆ : ಆರೆಂಜ್ ಅಲರ್ಟ್ ಘೋಷಣೆ

02/08/2020

ಮಡಿಕೇರಿ ಆ.2 : ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಲಿದ್ದು, ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆ.3ರಿಂದ 4ರ ಬೆಳಗಿನವರೆಗೆ ಯಲ್ಲೋ ಹಾಗೂ ಆ.4ರಿಂದ 7ರ ಬೆಳಗ್ಗಿನವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಆ.3ರ ಬೆಳಗ್ಗಿನಿಂದ 4ರ ಬೆಳಗಿನವರೆಗೆ 64.5ಮಿ.ಮೀ.ನಿಂದ 115.5ಮಿ.ಮೀ.ವರೆಗೆ ಮತ್ತು ಆ.4ರ ಬೆಳಗಿನಿಂದ 7ರ ಬೆಳಗಿನವರೆಗೆ 115.6ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗಲಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಹೆಚ್ಚಾಗುವ ಸಂಭವ ಇದ್ದು, ಜಿಲ್ಲಾಡಳಿತದಿಂದ ಹೊರಡಿಸುವ ಹವಾಮಾನ ಮುನ್ಸೂಚನೆಗಳನ್ನು ಗಮನಿಸುವಂತೆ ಹಾಗೂ ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ 24*7 ಕಂಟ್ರೋಲ್ ರೂಮ್ ಸಂಖ್ಯೆ 08272-221077 ಅಥವಾ ವಾಟ್ಸ್ ಆಪ್ ಸಂಖ್ಯೆ8550001077ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
::: ಮಳೆ ವಿವರ :::
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 19.3 ಮಿ.ಮೀ, ವೀರಾಜಪೇಟೆ ತಾಲೂಕಿನಲ್ಲಿ 7.85 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 7.43 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ ಮಳೆ 11.53 ಮಿ.ಮೀ. ಆಗಿದೆ.
ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 11, ಸಂಪಾಜೆ 22, ಭಾಗಮಂಡಲ 27.4 ನಾಪೋಕ್ಲು 16.8 ವೀರಾಜಪೇಟೆ ಕಸಬಾ 9.4, ಹುದಿಕೇರಿ 16, ಅಮ್ಮತ್ತಿ 7.5, ಪೊನ್ನಂಪೇಟೆ 6.2, ಶ್ರೀಮಂಗಲ 4, ಬಾಳೆಲೆ 4 ಸೋಮವಾರಪೇಟೆ ಕಸಬಾ 4.4, ಶಾಂತಳ್ಳಿ 20, ಕೊಡ್ಲಿಪೇಟೆ 11.2, ಶನಿವಾರ ಸಂತೆ 3.6, ಕುಶಾಲನಗರ 1.2, ಸುಂಟಿಕೊಪ್ಪ 4.2 ಮಿ.ಮೀ.ಮಳೆಯಾಗಿರುವುದಾಗಿ ವರದಿಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಭಾನುವಾರ ಜಲಾಶಯದಲ್ಲಿ 2856.77 ಅಡಿ ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 705 ಕ್ಯುಸೆಕ್ ನೀರು ಹರಿದುಬರುತ್ತಿದ್ದು, ನದಿಗೆ 150 ಹಾಗೂ ನಾಲೆಗೆ 1000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.