ಆಮೆಗತಿಯಲ್ಲಿ ಸಾಗುತ್ತಿದೆ ಕಾಡಾನೆ ತಡೆ ಬೇಲಿ ನಿರ್ಮಾಣ : ಗ್ರಾಮಸ್ಥರ ಅಸಮಾಧಾನ

02/08/2020

ಮಡಿಕೇರಿ ಆ.2 : ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಡಾನೆ ತಡೆ ಬೇಲಿ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆಲ್ಯಹುದಿಕೇರಿ ಗ್ರಾ.ಪಂ ಯ ಬರಡಿ ಗ್ರಾಮದಿಂದ ವಾಲ್ನೂರು- ತ್ಯಾಗತ್ತೂರು ಪಂಚಾಯ್ತಿ ವ್ಯಾಪ್ತಿಯ ಅಮ್ಮಂಗಲ ಗ್ರಾಮದವರೆಗೆ ಸುಮಾರು 7.50 ಕಿ.ಮೀ. ದೂರದವರೆಗೆ ರೈಲ್ವೆ ಕಂಬಿಗಳಿಂದ ಕಾಡಾನೆ ತಡೆ ಬೇಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಆರಂಭಗೊಂಡು ಒಂದು ವರ್ಷವೇ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಗುಂಡ್ಲುಪೇಟೆಯ ವ್ಯಕ್ತಿಯೊಬ್ಬರು ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಪ್ರತಿ ಕಿ.ಮೀ. ಗೆ 1.10 ಕೋಟಿ ರೂ. ಗಳನ್ನು ಖರ್ಚು ಮಾಡಲಾಗುತ್ತಿದೆ. ಈ ಬೇಲಿ ನಿರ್ಮಾಣಕ್ಕಾಗಿ ಪರಿಕರಗಳನ್ನು ತೆಗೆದುಕೊಂಡು ಹೋಗಲು ಬೆಳೆಗಾರರಾದ ಮುಂಡ್ರಮನೆ ಬಿದ್ದಪ್ಪ, ಕುಶಾಲಪ್ಪ ಹಾಗೂ ಶಿವಕುಮಾರ್ ಅವರುಗಳು ತಮ್ಮ ಗದ್ದೆಯನ್ನೇ ಬಿಟ್ಟುಕೊಟ್ಟಿದ್ದರು.
ಕಾಮಗಾರಿ ವಿಳಂಬದಿಂದಾಗಿ ಕಾಡಾನೆಗಳ ಹಿಂಡು ಇದೇ ಮಾರ್ಗವಾಗಿ ರಾಜಾರೋಷವಾಗಿ ಗ್ರಾಮಗಳನ್ನು ಪ್ರವೇಶಿಸುತ್ತಿದೆ. ಮಹಾಗುಂಡಿ ಪಾಲ ಎಂಬ ಪ್ರದೇಶವೇ ಕಾಡಾನೆಗಳ ಪ್ರವೇಶದ ಹೆಬ್ಬಾಗಿಲಾಗಿದೆÉ. ಆದರೆ ಇಲ್ಲಿ ಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಈ ಕ್ರಮ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸದಿದ್ದಲ್ಲಿ ಅರಣ್ಯ ಅಧಿಕಾರಿಗಳಿಗೆ ದಿಗ್ಬಂಧನ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಹಾಗುಂಡಿ ಪಾಲದಲ್ಲಿ ಮೊದಲು ಬೇಲಿ ನಿರ್ಮಿಸಿ ದುಬಾರೆ ಮತ್ತು ನೀರುಕೊಲ್ಲಿ ಅರಣ್ಯ ಭಾಗದಿಂದ ಕಾಡಾನೆಗಳು ಬರುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಸುಮಾರು 7.70 ಕೋಟಿ ರೂ. ಗಳ ಯೋಜನೆಯೊಂದು ನೆನೆಗುದಿಗೆ ಬಿದ್ದಿರುವ ಬಗ್ಗೆ ಸ್ಥಳೀಯ ಬೆಳೆಗಾರರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.