ಪೊನ್ನಂಪೇಟೆ ಸೀಲ್ ಡೌನ್ ಪ್ರದೇಶಕ್ಕೆ ಕಿಟ್ ವಿತರಣೆ

02/08/2020

ಪೊನ್ನಂಪೇಟೆ, ಅ.2 : ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ವಿಭಾಗದ ಮಹಾತ್ಮ ಗಾಂಧಿ ನಗರದ (ಎಂ.ಜಿ ನಗರ) ಕೋವಿಡ್ ಸಂಬಂಧಿತ ಸೀಲ್ ಡೌನ್ ಪ್ರದೇಶಕ್ಕೆ ಸ್ಥಳೀಯ ಯುವಕರು ಸೇರಿ ದಾನಿಗಳ ನೆರವಿನಿಂದ ಅಗತ್ಯ ದಿನಸಿ ಸಾಮಗ್ರಿಗಳ ಕೀಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಮಹಾತ್ಮ ಗಾಂಧಿ ನಗರದ ಭಾಗವೊಂದರ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡ ಪರಿಣಾಮ ಈ ಭಾಗವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದೆ. ಆದ್ದರಿಂದ ಅಲ್ಲಿ ವಾಸಿಸುತ್ತಿದ್ದ ಜನರು ಹೊರಬರಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಸ್ಥಳೀಯ ಕ್ರಿಯಾಶೀಲ ಯುವಕರ ತಂಡ ತಲಾ ಕುಟುಂಬಗಳಿಗೆ 10 ದಿನಗಳಿಗೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಅಲ್ಲಿನ 13 ಕುಟುಂಬಗಳಿಗೆ ವಿತರಿಸಿದರು.
ಪೊನ್ನಂಪೇಟೆಯ ಮಹಾತ್ಮ ಗಾಂಧಿ ನಗರ ಭಾಗವನ್ನು ಸಂಪೂರ್ಣವಾಗಿ ಕೊರೋನಾ ಸೋಂಕು ಮುಕ್ತ ಪ್ರದೇಶ ವನ್ನಾಗಿಸಲು ಪಣತೊಟ್ಟಿರುವ ಈ ಯುವಕರ ತಂಡ, ಕಳೆದ 15ದಿನಗಳಿಂದ ಇದಕ್ಕಾಗಿ ಶಕ್ತಿಮೀರಿ ಶ್ರಮಿಸುತ್ತಿದೆ. ಈ ಪ್ರದೇಶದ ಸುಮಾರು 15ಕ್ಕೂ ಹೆಚ್ಚು ಯುವಕರು ತಾವೇ ಸ್ವತಹ ಕೈಯಿಂದ ಹಣ ಹಾಕಿ ಎಂ.ಜಿ. ನಗರದ ಪ್ರವೇಶದ್ವಾರದಲ್ಲಿ ಟೆಂಟ್ ನಿರ್ಮಿಸಿ ಸ್ವಯಂ ಪ್ರೇರಣೆಯಿಂದ ಕೋರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಎಂ.ಜಿ. ನಗರಕ್ಕೆ ಬರುವ ಪ್ರತಿಯೊಬ್ಬರನ್ನು ತರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿ ನಂತರ ಅವರಿಗೆ ಸ್ಯಾನಿಟೈಸರ್ ನೀಡಿ ಬಿಡಬಿಡುತಿದ್ದಾರೆ. ತರ್ಮಲ್ ತಪಾಸಣೆ ವೇಳೆ ದೇಹದ ಉಷ್ಣಾಂಶ ಹೆಚ್ಚು ಕಂಡು ಬಂದರೆ ಅಂತಹ ವ್ಯಕ್ತಿಗಳಿಗೆ ಎಂ.ಜಿ. ನಗರ ಪ್ರವೇಶಿಸಲು ಅವಕಾಶವಿಲ್ಲ. ಸ್ಥಳೀಯ ಗ್ರಾಮ ಪಂಚಾಯತಿ ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದು ಹಗಲು-ರಾತ್ರಿಯೆನ್ನದೆ ಮಾಡುತ್ತಿರುವ ಈ ಯುವಕರ ಸಾಮಾಜಿಕ ಕಳಕಳಿಯ ಕೆಲಸ ಸ್ಥಳೀಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.