ಕೊಡಗು ದಫ್ ಸಮಿತಿಯ ಅಧ್ಯಕ್ಷರಾಗಿ ಆಲೀರ ಎಂ. ರಶೀದ್ ಆಯ್ಕೆ

02/08/2020

ಪೊನ್ನಂಪೇಟೆ, ಅ.2:  ಕೊಡಗಿನ ಇಸ್ಲಾಂ ಸಾಂಸ್ಕೃತಿಕ ಸಂಘಟನೆಯಾದ ಕೊಡಗು ದಫ್ ಸಮಿತಿಯ (ಕೆ.ಡಿ.ಎಸ್.) ನೂತನ ಅಧ್ಯಕ್ಷರಾಗಿ ಪೊನ್ನಂಪೇಟೆಯ ಆಲೀರ ಎಂ. ರಶೀದ್ ಅವರು ಆಯ್ಕೆಯಾಗಿದ್ದಾರೆ.
ವಿರಾಜಪೇಟೆಯ ಡಿ.ಎಚ್.ಎಸ್. ಎನ್ಕ್ಲೇವ್ ನಲ್ಲಿರುವ ಎನ್.ಸಿ.ಟಿ. ಎಂಟರ್ಪ್ರೈಸಸ್ ಸಭಾಂಗಣದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯಿದು ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಲೀರ ಎಂ. ರಶೀದ್ ಅವರನ್ನು ಸಮಿತಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಳಿಸಲಾಯಿತು.
ಇವರೊಂದಿಗೆ ಸಮಿತಿಯ ನೂತನ ಪದಾಧಿಕಾರಿಗಳನ್ನು ಮಹಾಸಭೆಯಲ್ಲೇ ಅವಿರೋಧವಾಗಿ ನೇಮಕಗೊಳಿಸಲಾಯಿತು. ಅದರಂತೆ ಉಪಾಧ್ಯಕ್ಷರಾಗಿ ಪೈಝು ಚಿಟ್ಟಡೆ ಹಾಗು ಝುಬೈರ್ ಕಡಂಗ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಗುಂಡಿಕೆರೆ, ಸಹ ಕಾರ್ಯದರ್ಶಿಯಾಗಿ ತೌಸಿಫ್ ಅಮ್ಮತಿ, ಕೋಶಾಧಿಕಾರಿಯಾಗಿ ಬಶೀರ್ ಗುಂಡಿಕೆರೆ, ನಿರ್ದೇಶಕರುಗಳಾಗಿ ಝುಬೈರ್ ಬೆಂಗಳೂರು, ಅಬ್ಬಾಸ್ ಝೈನಿ  ದೇವಣಗೇರಿ, ಆಶ್ರಫ್ ಎಮ್ಮೆಮಾಡು ಮತ್ತು ಅಶ್ರಫ್ ವಯಕೋಲ್ ಅವರು ಆಯ್ಕೆಗೊಂಡರು. 
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಆಲೀರ ಎಂ. ರಶೀದ್, ಕೊಡಗು ದಫ್ ಸಮಿತಿ ಎಂಬ ಮುಸ್ಲಿಂ ಸಾಂಸ್ಕೃತಿಕ ಸಂಘಟನೆಯನ್ನು ಯಾವುದೇ ಇತರ ಸಂಘಟನೆಗಳಿಗೆ ಪ್ರತಿಸ್ಪರ್ಧಿಯಾಗಿ ಮಾರ್ಪಡಿಸದೆ  ತನ್ನ ದೀನಿಪರವಾದ ಕಾರ್ಯಚಟುವಟಿಕೆಗಳೊಂದಿಗೆ  ಮತ್ತಷ್ಟು ಗಟ್ಟಿಗೊಳಿಸಲು ತಳಮಟ್ಟದಿಂದಲೇ ಶ್ರಮಿಸಲಾಗುವುದು. ಕೊಡಗಿನಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಸೂಕ್ತ ಅವಕಾಶಗಳ ಕೊರತೆಯಿಂದ ಅವರ ಪ್ರತಿಭೆಗೆ ಮನ್ನಣೆ ಇಲ್ಲದಂತಾಗಿದೆ. ಆದ್ದರಿಂದ ಅರ್ಹರನ್ನು ಗುರುತಿಸಿ ಅವರ ಪ್ರತಿಭೆಗೆ ಅವಕಾಶ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಮಹಾಸಭೆ ಅಧ್ಯಕ್ಷತೆ ವಹಿಸಿದ್ದ ಅಕ್ಕಳತಂಡ ಎಸ್. ಮೊಯಿದು  ಅವರು ಮಾತನಾಡಿ, ಇದುವರೆಗೂ ಸಮಿತಿಯ ನಿರ್ದೇಶಕರಾಗಿ ಸಕ್ರೀಯರಾಗಿ ಕಾರ್ಯನಿರ್ವಹಿಸಿದ ರಶೀದ್ ಅವರ ಕ್ರಿಯಾಶೀಲತೆಯನ್ನು ಪರಿಗಣಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳಿಸಲಾಗಿದೆ. ಇವರ ನೇತೃತ್ವದಲ್ಲಿ ಈ ಸಂಘಟನೆ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂಬ ವಿಶ್ವಾಸವಿದೆ. ಜಿಲ್ಲೆಯ ನಾನಾ ಭಾಗಗಳಲ್ಲಿ ತೆರೆಮರೆಯ ಕಾಯಿಗಳಂತೆ ಇರುವ ಪ್ರತಿಭೆಗಳನ್ನು ಗುರುತಿಸಿ ಅಂತವರಿಗೆ ಅವಕಾಶ ಒದಗಿಸುವ ಹಿನ್ನೆಲೆಯಲ್ಲಿ ಈ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಜಿಲ್ಲೆಯ ಸೂಕ್ತ ಪ್ರತಿಭೆಗಳ ದಫ್ ಮತ್ತು ಇಸ್ಲಾಂ ಕಲಾಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಿಸಲು ಈ ಸಮಿತಿ ಬದ್ಧವಾಗಿದ್ದು, ಇದರ ಪ್ರಯೋಜನವನ್ನು ಕೊಡಗಿನ ಪ್ರತಿಭೆಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷರಾದ ಆಲೀರ ಎಂ. ರಶೀದ್ ಅವರು, ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡವ ಮುಸ್ಲಿಂ ಅಸೋಸಿಯೇಷನ್ ನ (ಕೆ.ಎಂ.ಎ.) ಸದಸ್ಯರಾಗಿರುವ ಇವರು, ಕಾಟ್ರಕೊಲ್ಲಿಯ  ಮೋಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಮಜೀದ್ ಅವರು ಉಪಸ್ಥಿತರಿದ್ದರು. ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಗುಂಡಿಕೆರೆಯ ಆಲಿ ಮುಸ್ಲಿಯಾರ್ ನೇತೃತ್ವ ನೀಡಿದರು. ಸಮಿತಿ ಪದಾಧಿಕಾರಿ ಶಫೀಕ್ ಗುಂಡಿಕೆರೆ ಸ್ವಾಗತಿಸಿದರು.ತೌಸೀಫ್  ಅಮ್ಮತ್ತಿ ವಂದಿಸಿದರು.