ಕೊಡಗಿನಲ್ಲಿ ಕೊರೋನಾಕ್ಕೆ ಮತ್ತೊಂದು ಬಲಿ : ಮೃತರ ಸಂಖ್ಯೆ 10ಕ್ಕೆ ಏರಿಕೆ

ಮಡಿಕೇರಿ ಆ. 3 : ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಇದರಿಂದಾಗಿ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10 ಕ್ಕೇರಿದೆ. ವಿವರ ಕೆಳಕಂಡಂತಿದೆ.
ಮಡಿಕೇರಿ ನಗರ ಮಹದೇವಪೇಟೆ ಬಳಿಯ ಅಬ್ದುಲ್ ಕಲಾಂ ಲೇ ಔಟ್ ನ ನಿವಾಸಿ, 64 ವರ್ಷದ ಪುರುಷರೊಬ್ಬರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಮೂರು ದಿನಗಳಿಂದ ಅವರಲ್ಲಿ ಕೆಮ್ಮು ಕಾಣಿಸಿಕೊಂಡಿರುತ್ತದೆ.
ಕೆಮ್ಮಿನ ಸಂಬಂಧ ಇವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡುವಂತೆ ಸಲಹೆ ನೀಡಿರುತ್ತಾರೆ. ಕಳೆದ ಎರಡು ದಿನಗಳಿಂದ ಇವರಿಗೆ ತುಂಬಾ ಸುಸ್ತು ಇದ್ದು, ಅದರಂತೆ ಅವರು ನಿನ್ನೆ ದಿನಾಂಕ: 02-08-2020 ರಂದು ಸಂಜೆ ಸುಮಾರು 7.00 ಗಂಟೆಗೆ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಿರುತ್ತಾರೆ. Rapid Antigen Kit ಮೂಲಕ ಇವರ ಗಂಟಲು/ಮೂಗು ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಇವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ತಕ್ಷಣ ಚಿಕಿತ್ಸೆ ಪ್ರಾರಂಭಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ (ದಿ:02-08-2020 ರಂದು) ರಾತ್ರಿ 9.30 ಗಂಟೆಗೆ ಮೃತರಾಗಿರುತ್ತಾರೆ. ಮೃತ ದೇಹದ ಅಂತ್ಯ ಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಇಂದು ನೆರವೇರಿಸಲಾಗುವುದು.
