ಮಹಿಳಾ ಐಪಿಎಲ್ ಟೂರ್ನಿ ನಡೆಯಲಿದೆ

03/08/2020

ನವದೆಹಲಿ ಆ.3 : ಪುರುಷರ ಐಪಿಲ್ ಕ್ರಿಕೆಟ್ ಲೀಗ್ ನಂತೆಯೇ ಮಹಿಳಾ ಐಪಿಎಲ್ ಟೂರ್ನಿಯನ್ನೂ ಕೂಡ ಆಯೋಜನೆ ಮಾಡುತ್ತೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಭಾನುವಾರ ಈ ಬಗ್ಗೆ ಮಾತನಾಡಿದ ಅವರು ಮಹಿಳಾ ಐಪಿಎಲ್ ಅಥವಾ ಅದೇ ರೀತಿಯ ಚಾಲೆಂಜರ್ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧವಾಗಿದೆ. ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ. ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಮಹಿಳಾ ಐಪಿಎಲ್ ಟೂರ್ನಿಯ ಕುರಿತು ವೇಳಾಪಟ್ಟಿ ಯೋಜಿಸುತ್ತೇವೆ ಎಂದು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಗಂಗೂಲಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಮಹಿಳಾ ಐಪಿಎಲ್ ಟೂರ್ನಿಯನ್ನು ನವೆಂಬರ್ 1-10 ಅವಧಿಯಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ಮನೆಯಲ್ಲಿರುವ ಆಟಗಾರ್ತಿಯರಿಗೆ ತರಬೇತಿ ಕ್ಯಾಂಪ್ ಆಯೋಜಿಸುವ ಕುರಿತೂ ಕೂಡ ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ. ಈ ವರೆಗೂ ನಮ್ಮ ಯಾವುದೇ ಕ್ರಿಕೆಟಿಗರೂ ಸೋಂಕಿಗೆ ತುತ್ತಾಗಿಲ್ಲ. ಅಂತೆಯೇ ಪುರುಷ ಕ್ರಿಕೆಟಿಗರಿಗರಾಗಲಿ, ಮಹಿಳಾ ಆಟಗಾರ್ತಿಯರಾಗಿರಲಿ ಆಟಗಾರರ ಸುರಕ್ಷತೆ ಮುಖ್ಯ ಎಂದು ಗಂಗೂಲಿ ಹೇಳಿದ್ದಾರೆ.