ಸಾಧಕ ವಿದ್ಯಾರ್ಥಿನಿ ಟಿ.ಕೆ ಭವಾನಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ನೆರವು

03/08/2020

ಮಡಿಕೇರಿ ಆ. 3 : ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಾಧಕ ವಿದ್ಯಾರ್ಥಿನಿ ಟಿ.ಕೆ. ಭವಾನಿಗೆ ದಿನಬಳಕೆಯ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕೆಲ ದಿನಗಳ ಹಿಂದೆ ಭವಾನಿಯ ಬಡತನದ ಸಂಕಷ್ಟದ ಬದುಕಿನ ಕುರಿತು ಸ್ಥಳೀಯ ಪತ್ರಿಕೆಯೊಂದರಲ್ಲಿ ಬಂದ ವರದಿಗೆ ಸ್ಪಂದಿಸಿ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಅವರ ಸಮ್ಮುಖದಲ್ಲಿ ಸಂಘಟನೆಯ ಸದಸ್ಯರೊಡನೆ ಭವಾನಿಯ ಮನೆಗೆ ಭೇಟಿ ನೀಡಿ ಆಕೆಯ ಕುಟುಂಬಕ್ಕೆ ಸಹಾಯವಾಗುವಂತೆ ದಿನಸಿ ಪದಾರ್ಥಗಳನ್ನು ವಿತರಿಸಿದರು.
ಇದೇ ಸಂದರ್ಭ ಯಾವುದೇ ನೆರವು ಬೇಕಿದ್ದರೂ ಸಂಘಟನೆ ವತಿಯಿಂದ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಡಿ.ಎಸ್.ಎಸ್‍ನ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ತಾಲೂಕು ಸಂಚಾಲಕ ಎ.ಪಿ. ದೀಪಕ್, ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಸೋಮೇಶ್, ಕ್ರಿಯೇಟಿವ್ ಖಲೀಲ್, ಸಿದ್ದೇಶ್, ಮಾದೇವ್ ಹಾಗೂ ಮತ್ತಿತರರು ಹಾಜರಿದ್ದರು.