ಸಾಲ ನೀಡಿದ ಸಂಸ್ಥೆಗಳಿಂದ ನಿತ್ಯ ಕಿರುಕುಳ : ಆರೋಪ

03/08/2020

ಮಡಿಕೇರಿ ಆ.3 : ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಮೈಕ್ರೋಫೈನಾನ್ಸ್, ಖಾಸಗಿ ಹಣಕಾಸು ಸಂಸ್ಥೆಗಳು ಸೇರಿದಂತೆ ಸಾಲ ನೀಡಿದ ಕೆಲವು ಸಂಘಗಳು ಸಾಲ ಮತ್ತು ಬಡ್ಡಿಯನ್ನು ಮರಳಿಸುವಂತೆ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿರುವ ವಿರಾಜಪೇಟೆಯ ಕಾರ್ಮಿಕ ವರ್ಗ ಹಾಗೂ ವಿವಿಧ ಉದ್ಯೋಗದಲ್ಲಿ ತೊಡಗಿರುವ ಪ್ರಮುಖರು ಸಾಲ ತೀರಿಸಲು ಡಿಸೆಂಬರ್ ವರೆಗೆ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ವಿರಾಜಪೇಟೆ ನಿವಾಸಿ ಪಿ.ಶಂಕರ್ ಮತ್ತಿತರರು ದುಡಿಮೆ ಇಲ್ಲದೆ ಊಟಕ್ಕೂ ಕಷ್ಟ ಪಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲ ನೀಡಿದ ಸಂಸ್ಥೆಗಳು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದು, ಕಿರುಕುಳ ಹೀಗೆ ಮುಂದುವರೆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಡತನದ ನಡುವೆಯೂ ಕಳೆದ ಹಲವಾರು ವರ್ಷಗಳಿಂದ ಸಾಲವನ್ನು ಪಡೆದು ಕಾಲಕಾಲಕ್ಕೆ ಕಂತುಗಳ ರೂಪದಲ್ಲಿ ಮರು ಪಾವತಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆಯಲಾಗಿದೆ. ಆದರೆ ಖಾಸಗಿ ಹಣಕಾಸು ಸಂಸ್ಥೆಗಳು ಈಗಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾವುದೇ ಕನಿಕರ ತೋರದೆ ಕಡ್ಡಾಯವಾಗಿ ಸಾಲದ ಜೊತೆಯಲ್ಲಿ ಎರಡು ಪಟ್ಟು ಬಡ್ಡಿಯನ್ನು ಸೇರಿಸಿ ಸಾಲವನ್ನು ಮರುಪಾವತಿಸುವಂತೆ ಪೀಡಿಸುತ್ತಿದ್ದು, ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ ಎಂದರು.
ಸಾಲವನ್ನು ಮರುಪಾವತಿಸಲು ಡಿಸೆಂಬರ್ ವರೆಗೆ ಕಾಲಾವಕಾಶ ನೀಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ಮುಂದೆ ಆಗುವ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಕಿರುಕುಳ ನೀಡುತ್ತಿರುವ ಸಂಸ್ಥೆಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆಯ ಹೆಚ್.ಎ.ರವಿ, ಹಸ್ಲಂ, ಟಿ.ಎಸ್.ಸೌಮ್ಯ, ಟಿ.ಎನ್.ಆಶಾ ಹಾಗೂ ಹೆಚ್.ಪಿ.ವಿಲೀನ ಉಪಸ್ಥಿತರಿದ್ದರು.