ಬೆಟ್ಟದಕಾಡು ಅತ್ತಿಮಂಗಲ ವ್ಯಾಪ್ತಿಯಲ್ಲಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ

03/08/2020

ಮಡಿಕೇರಿ ಆ. 3 : ನೆಲ್ಲಿಹುದಿಕೇರಿ ಭಾಗದ ಬೆಟ್ಟದಕಾಡು ಅತ್ತಿಮಂಗಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕುಶಾಲನಗರ ಮೀನು ಕೊಲ್ಲಿ ಹಾಗೂ ಆನೆಕಾಡು ಉಪವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.
ಒಂದು ಗುಂಪಿನ ಕಾಡಾನೆಗಳನ್ನು ದುಬಾರೆ ಅರಣ್ಯಕ್ಕೆ ಓಡಿಸಲಾಯಿತು. ಮತ್ತೊಂದು ಗುಂಪಿನ ಕಾಡಾನೆಗಳು ಮರಿ ಆನೆಗಳೊಂದಿಗೆ ಬೀಡುಬಿಟ್ಟಿವೆ.
ಮಳೆಯ ನಡುವೆ ಕಾರ್ಯಾಚರಣೆ ನಡೆಸಲಾಗಿದ್ದು, ಸಂಜೆ ವರೆಗೆ ಮಳೆ ಸುರಿಯುತ್ತಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
ಎಸಿಎಪ್ ನೆಹರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಉಪ ಅರಣ್ಯಧಿಕಾರಿ ಕೂಡಕಂಡಿ ಸುಬ್ರಾಯ, ಮಹದೇವ್ ನಾಯಕ್ ಸೇರಿದಂತೆ 20 ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.