ಗಡಿ ರಸ್ತೆ ಸಂಚಾರ ಮುಕ್ತಗೊಳಿಸದಿದ್ದರೆ ಕಾನೂನು ಹೋರಾಟ : ಜೆಡಿಎಸ್ ಎಚ್ಚರಿಕೆ

03/08/2020

ಮಡಿಕೇರಿ ಆ.3 : ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕರಿಕೆ ಹಾಗೂ ಕುಟ್ಟ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಒತ್ತಾಯಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಪ್ಪಿದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೋನಾ ನಿರ್ಬಂಧಗಳನ್ನು ಸಡಿಲಿಸಿ ಎಲ್ಲಾ ಮಾರ್ಗಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಕೊಡಗು ಜಿಲ್ಲೆಯಲ್ಲಿ ಮಾತ್ರ ಪ್ರತ್ಯೇಕ ನಿಯಮ ಪಾಲನೆಯಾಗುತ್ತಿದೆ. ಜಿಲ್ಲಾಡಳಿತ ಸರ್ಕಾರದ ಆದೇಶದಂತೆ ನಡೆದುಕೊಳ್ಳದೆ ಶಾಸಕರುಗಳ ಮಾತು ಕೇಳಿಕೊಂಡು ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕರಿಕೆ ಮತ್ತು ಕುಟ್ಟ ಗ್ರಾಮದ ಜನಸಾಮಾನ್ಯರು ನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಣ್ಣು ಹಾಕಿ ರಸ್ತೆ ಸಂಪರ್ಕ ಕಡಿತಗೊಳಿಸಿರುವುದರಿಂದ ಪಕ್ಕದ ಊರುಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ಕೊಳ್ಳಲಾಗದೆ ಮತ್ತು ತುರ್ತು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಪರದಾಡುತ್ತಿದ್ದಾರೆ. ಮಳೆ ಕೂಡ ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದು, ಮರ, ಬರೆ ಬಿದ್ದರೆ ಸಂಪೂರ್ಣ ಸಂಪರ್ಕವೇ ಕಡಿತಗೊಂಡು ಗ್ರಾಮಸ್ಥರು ದ್ವೀಪದಲ್ಲಿ ಸಿಲುಕಿದಂತೆ ಅತಂತ್ರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಗಣೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ ಎಲ್ಲಾ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಜನ ಬಂದು ಹೋಗುತ್ತಿದ್ದಾರೆ. ಆದರೆ ಕೇರಳ ರಾಜ್ಯದ ಸಂಪರ್ಕವನ್ನು ಮಾತ್ರ ಕಡಿತಗೊಳಿಸಿ ಜನರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಹಲವು ಸಂಶಯಗಳು ಮೂಡುತ್ತಿದೆ. ಗಡಿ ಗ್ರಾಮಗಳ ಜನರು ಮಣ್ಣಿನ ರಾಶಿಯನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರೂ ಶಾಸಕರು ಅಡ್ಡಿಪಡಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಜನಪರವಾಗಿ ಕಾರ್ಯ ನಿರ್ವಹಿಸದೆ ಶಾಸಕರು ಹೇಳಿದಂತೆ ಕೇಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೇರಳ ರಾಜ್ಯದಿಂದ ಯಾರೂ ಕೊಡಗಿಗೆ ಬರಬಾರದೆಂದು ರಸ್ತೆಗೆ ಮಣ್ಣನ್ನು ಸುರಿಯಲಾಗಿದೆ. ಆದರೆ ಬೇರೆ ಮಾರ್ಗಗಳನ್ನು ಬಳಸಿಕೊಂಡು ಕೇರಳದ ಮಂದಿ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಾರೆ. ಈ ರೀತಿಯ ಅವೈಜ್ಞಾನಿಕ ಕ್ರಮಗಳನ್ನು ಜಾರಿಗೆ ತಂದು ಸ್ಥಳೀಯ ಗ್ರಾಮಸ್ಥರಿಗೆ ತೊಂದರೆ ನೀಡುವ ಬದಲು ನೈಜ ಪರಿಸ್ಥಿತಿಯನ್ನು ಅಧಿಕಾರಿಗಳು ಅಧ್ಯಯನ ಮಾಡಬೇಕಾಗಿದೆ. ರಸ್ತೆ ಸಂಚಾರ ನಿರ್ಬಂಧವನ್ನು ತೆರವುಗೊಳಿಸಿದರೆ ಗಡಿ ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ.
ರಸ್ತೆ ಬಂದ್ ನಿಂದ ಅನಿವಾರ್ಯ ಪರಿಸ್ಥಿತಿಗಳಲ್ಲಿ ಬೇರೆÀ ಊರಿಗೆ ತೆರಳಲು ಹೆಚ್ಚಿನ ದೂರವನ್ನು ಕ್ರಮಿಸಬೇಕಾಗುವುದರಿಂದ ಹೆಚ್ಚಿನ ವೆಚ್ಚವಾಗುತ್ತದೆ. ಕೆಲಸವಿಲ್ಲದೆ ಬಡತನದಲ್ಲಿ ದಿನದೂಡುತ್ತಿರುವ ಮಂದಿಗೆ ಇದು ಹೊರೆಯಾಗುತ್ತದೆ ಮತ್ತು ಅನಾರೋಗ್ಯ ಪೀಡಿತರು ತುರ್ತಾಗಿ ಆಸ್ಪತ್ರೆಗಳಿಗೆ ತಲುಪಲು ಸಾಧ್ಯವಾಗದೆ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ತಕ್ಷಣ ಜಿಲ್ಲಾಡಳಿತ ಕೇರಳ ಸಂಪರ್ಕದ ಗಡಿ ಗ್ರಾಮಗಳ ರಸ್ತೆ ಸಂಪರ್ಕವನ್ನು ಮುಕ್ತಗೊಳಿಸಬೇಕೆಂದು ಗಣೇಶ್ ಒತ್ತಾಯಿಸಿದ್ದಾರೆ.
ಸರ್ಕಾರ ಜಾರಿಗೆ ತಂದÀ ಆದೇಶವನ್ನು ಉಲ್ಲಂಘಿಸಿ ತನಗಿಷ್ಟ ಬಂದಂತೆ ಜಿಲ್ಲಾಡಳಿತ ನಡೆದುಕೊಂಡರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಜನಪರವಾಗಿ ಕಾರ್ಯ ನಿರ್ವಹಿಸಬೇಕಾದ ಶಾಸಕರುಗಳು ಗೆದ್ದ ನಂತರವೂ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಬೇಕೆಂದು ಅವರು ಹೇಳಿದ್ದಾರೆ. ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ಎಲ್ಲಾ ರಾಜ್ಯಗಳ ಜನರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಂದಾಣಿಕೆಯಿಂದ ಕರ್ತವ್ಯವನ್ನು ನಿಭಾಯಿಸಬೇಕಾಗುತ್ತದೆ. ಆದರೆ ಗಡಿ ಗ್ರಾಮಗಳ ಜನರ ಹಕ್ಕುಗಳನ್ನು ಕಸಿದುಕೊಂಡು ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡುವ ಭ್ರಮೆಯಲ್ಲಿ ಇಲ್ಲಿನ ಶಾಸಕರು ಹಾಗೂ ಜಿಲ್ಲಾಡಳಿತವಿದೆ ಎಂದು ಟೀಕಿಸಿದ್ದಾರೆ.
ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನೇ ಮಣ್ಣು ಹಾಕಿ ಮುಚ್ಚುವ ಕ್ರಮ ಕಾನೂನಿನ ಉಲ್ಲಂಘನೆಯಾಗಲಿದ್ದು, ಇದರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಬೇಕಾಗುತ್ತದೆ ಎಂದು ಗಣೇಶ್ ಎಚ್ಚರಿಕೆ ನೀಡಿದ್ದಾರೆ.