ಮಂದಿರ ಭೂಮಿ ಪೂಜೆಗೆ ಇಕ್ಬಾಲ್ ಅನ್ಸಾರಿ

04/08/2020

ಅಯೋಧ್ಯಾ ಆ.4 : ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ದಾವೆ ಹೂಡಿದ್ದ ಇಕ್ಬಾಲ್ ಅನ್ಸಾರಿ ಬುಧವಾರ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಲ್ಲದೆ ಪ್ರಧಾನಿ ನರೇಂದ್ರ ಮೋದಿಯವರಿಗೆ “ರಾಮ ನಾಮಿ” ಶಿಲೆ ಹಾಗೂ ರಾಮಚರಿತಮಾನಸ ಪ್ರತಿಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.
“ಭೂಮಿ ಪೂಜೆ ಸಮಾರಂಭಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನಿಂದ ನನಗೆ ಆಹ್ವಾನ ಬಂದಿದೆ. ನಾನು ಖಂಡಿತವಾಗಿಯೂ ಹಾಜರಾಗುತ್ತೇನೆ. ನ್ಯಾಯಾಲಯದ ತೀರ್ಪಿನ ನಂತರ ವಿವಾದ ಈಗ ಮುಗಿದಿದೆ” ಎಂದು 69 ವರ್ಷದ ಅನ್ಸಾರಿ ಪಿಟಿಐಗೆ ತಿಳಿಸಿದ್ದಾರೆ.
“ನಮ್ಮ ಪ್ರಧಾನಿ ಬರುತ್ತಿದ್ದಾರೆ. ನಾನು ಅವರನ್ನು ಭೇಟಿಯಾಗಿ ಅವರಿಗೆ ರಾಮ ನಾಮಿ ಶಿಲೆ (ಅದರ ಮೇಲೆ ರಾಮನ ಹೆಸರನ್ನು ಬರೆಯಲಾಗಿದೆ) ಮತ್ತು ರಾಮಚರಿತಮಾನಸ ಉಡುಗೊರೆ ನೀಡುತ್ತೇನೆ” ಎಂದು ಅನ್ಸಾರಿ ಹೇಳಿದರು.
ಬಾಬರಿ ಮಸೀದಿ-ರಾಮ್ ಜನ್ಮಭೂಮಿ ಭೂ ವಿವಾದ ಪ್ರಕರಣದ ಅತ್ಯಂತ ಹಳೆಯ ದಾವೆದಾರರಾಗಿದ್ದ ಅನ್ಸಾರ್ ಅವರ ತಂದೆ ಹಾಶಿಮ್ ಅನ್ಸಾರಿ 2016 ರಲ್ಲಿ ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾದರು, ನಂತರ ಮಗನಾದ ಇಕ್ಬಾಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಿದ್ದರು.