ಸಹೋದರಿಗಾಗಿ ನಕ್ಸಲ್ ಪೊಲೀಸರಿಗೆ ಶರಣು

04/08/2020

ದಾಂತೇವಾಡ ಆ.4: ರಕ್ಷಾ ಬಂಧನ್ ಶುಭ ಸಂದರ್ಭದಲ್ಲಿ ಮತ್ತೆ ಕಾಡಿಗೆ ವಾಪಸ್ ಹೋಗದಂತೆ ಸಹೋದರಿ ಮಾಡಿದ ಮನವಿಗೆ ತಲೆಬಾಗಿದ ನಕ್ಸಲ್ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ಈತನ ತಲೆಗೆ 8 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು.
ದಂತವಾಡ ಜಿಲ್ಲೆಯ ಪಾಲ್ನಾರ್ ಹಳ್ಳಿಯ ಮಲ್ಲ ಪೊಲೀಸರಿಗೆ ಶರಣಾದ ನಕ್ಸಲ್. 12ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಹೋಗಿ ನಕ್ಸಲ್ ಗುಂಪು ಸೇರಿದ್ದ ಈತ 14 ವರ್ಷದ ನಂತರ ಮನೆಗೆ ವಾಪಸ್ಸಾಗಿದ್ದಾನೆ.
ಈ ಎಲ್ಲಾ ವರ್ಷಗಳಲ್ಲಿ ತನ್ನ ಸಹೋದರಿ ಲಿಂಗೇಯನ್ನು ನೋಡದ ಮಲ್ಲ, ಇಂದು ತಂಗಿ ನೋಡಲು ಮನೆಗೆ ಬಂದಿದ್ದಾನೆ. ಈ ಸಂದರ್ಭ ಲಿಂಗೇ ಭದ್ರತಾ ಪಡೆಗಳ ನಕ್ಸಲ್ ನಿಗ್ರಹ ಕಾರ್ಯದಲ್ಲಿ ಹಲವು ನಕ್ಸಲರು ಪ್ರಾಣ ಕಳೆದುಕೊಂಡಿದ್ದು, ತನ್ನ ಸಹೋದರನ ಪ್ರಾಣದ ಬಗ್ಗೆ ಆತಂಕ ವ್ಯಕ್ತಪಡಿಸಿ ಮತ್ತೆ ಕಾಡಿಗೆ ಹೋಗದೆ ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿಕೊಂಡಿದ್ದಳು.