ಅತಿರೇಕದ ನಿರ್ಬಂಧಗಳು ಬೇಡ : ಸಿಪಿಐಎಂ ಒತ್ತಾಯ

05/08/2020

ಮಡಿಕೇರಿ ಆ.5 : ಕೊರೋನಾ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿದ್ದು, ದಿನಕ್ಕೊಂದು ನಿಯಮಗಳನ್ನು ಜಾರಿಗೊಳಿಸುವ ಮೂಲಕ ಜಿಲ್ಲೆಯ ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಡಾ.ಇ.ರಾ.ದುರ್ಗಪ್ರಸಾದ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊರ ಭಾಗಗಳಿಂದ ಜಿಲ್ಲೆಯನ್ನು ಪ್ರವೇಶಿಸುವವರಿಗೆ ಮುಕ್ತ ಅವಕಾಶವನ್ನು ನೀಡಿ ಜಿಲ್ಲೆಯೊಳಗಿರುವ ಜನರಿಗೆ ನಿರ್ಬಂಧಗಳ ಶಿಕ್ಷೆಯನ್ನು ನೀಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಸೀಲ್ ಡೌನ್ ಬಡಾವಣೆಗಳ ನಿವಾಸಿಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ನಿರ್ಬಂಧಗಳನ್ನು ಹೇರಿ ಮಾನಸಿಕ ಮತ್ತು ದೈಹಿಕ ಖಿನ್ನತೆಯನ್ನು ಉಂಟು ಮಾಡಲಾಗುತ್ತಿದೆ. ವಿರಾಜಪೇಟೆಯ ಮೊಗರ್ಗಲ್ಲಿಯಲ್ಲಿ ಕೊವೀಡ್ ರೋಗ ಬಾಧಿತರು ಕಂಡು ಬಂದ ಹಿನ್ನೆಲೆಯಲ್ಲಿ ಆ ಪ್ರದೇಶದ ಇಡೀ ರಸ್ತೆಯನ್ನೇ ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಜನ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಆರೋಪಿಸಿದ ದುರ್ಗಾಪ್ರಸಾದ್, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನೇ ಜಿಲ್ಲೆಯ ಎಲ್ಲಾ ಭಾಗಗಳಿಗೂ ಅನ್ವಯವಾಗುವಂತೆ ನೋಡಿಕೊಳ್ಳಬೇಕೆಂದರು.
ಸೀಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ಯಾವುದೇ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೊರೋನಾ ಮುಕ್ತವಾದ ಕೊಡಗು ಜಿಲ್ಲೆಯಲ್ಲಿ ಇಂದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಸೋಂಕು ವ್ಯಾಪಿಸುವುದನ್ನು ತಡೆಯುವ ಬದಲು ಜನಸಾಮಾನ್ಯರಿಗೆ ತೊಂದರೆ ನೀಡುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಜನರಿಗೆ ಸಹಕಾರಿಯಾಗುವ ರೀತಿಯ ನಿಯಮಗಳನ್ನು ಸರ್ಕಾರ ರೂಪಿಸಬೇಕು ಮತ್ತು ಅವುಗಳನ್ನು ಅಧಿಕಾರಿಗಳು ಅನುಷ್ಠಾನಕ್ಕೆ ತರಬೇಕು. ಅಲ್ಲದೆ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಜವಬ್ದಾರಿಯಿಂದ ವರ್ತಿಸಬೇಕೆಂದು ದುರ್ಗಾಪ್ರಸಾದ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ವಿರಾಜಪೇಟೆ ಕಾರ್ಯದರ್ಶಿ ಹೆಚ್.ಆರ್.ಶಿವಪ್ಪ ಉಪಸ್ಥಿತರಿದ್ದರು.