ಕೊಡಗಿನಲ್ಲಿ ಆಶ್ಲೇಷ ಅತಿರೇಕ : ಉಕ್ಕಿ ಹರಿಯುತ್ತಿರುವ ನದಿಗಳು : ಧರೆಗುರುಳಿದ ಮರಗಳು

ಮಡಿಕೇರಿ ಆ.5 : ಕೊಡಗು ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅತಿರೇಕಗೊಂಡಿದ್ದು, ನದಿ, ತೊರೆಗಳು ತುಂಬಿ ಹರಿಯಲು ಆರಂಭಿಸಿವೆ. ಮರ, ವಿದ್ಯುತ್ ಕಂಬ, ಬರೆಗಳು ಬಿದ್ದ ಪರಿಣಾಮ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾಗಿದೆ. ನಾಡಿನ ಜೀವನದಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯಲಾರಂಭಿಸಿವೆ.
ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯ ಹಲವೆಡೆ ಭೂ ಕುಸಿತ ಉಂಟಾಗಿದ್ದು, ಮರಗಳು ಧರೆಗುರುಳಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ಕಾವೇರಿ ನದಿಯ ಉಗಮ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ಭಾಗಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ದಾಖಲೆಯ ಎಂಟು ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಬೆಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ನಾಪೋಕ್ಲು, ಮೂರ್ನಾಡು ಬಲಮುರಿ, ಸಿದ್ದಾಪುರ, ಕುಶಾಲನಗರ ವ್ಯಾಪ್ತಿಯಲ್ಲು ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
::: ಹಳೇ ಸೇತುವೆ ಮುಳುಗಡೆ :::
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮೂರ್ನಾಡು ಬಲಮುರಿಯಲ್ಲಿನ ಹಳೇ ಸೇತುವೆ ಮುಳುಗಡೆಯಾಗಿದ್ದು, ಸೇತುವೆಯ ಮೇಲ್ಭಾಗ ನಾಲ್ಕು ಅಡಿಗಳಷ್ಟು ನೀರು ಹರಿದು ಹೋಗುತ್ತಿದೆ. ಹಳೇ ಸೇತುವೆಯ ಪಕ್ಕವೆ ನೂತನ ಸೇತುವೆ ಇರುವುದರಿಂದ ಸಂಚಾರಕ್ಕೆ ತೊಡಕುಂಟಾಗಿಲ್ಲ.
ಕಾವೇರಿ ನದಿ ಪಾತ್ರದ ಕೊಂಡಂಗೇರಿ ಸೇತುವೆಯ ಬಳಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಗದ್ದೆಬಯಲುಗಳು ನೀರಿನಿಂದ ಆವೃತ್ತವಾಗಿದೆ. ದಕ್ಷಿಣ ಕೊಡಗಿನ ಬಾಳೆಲೆ, ನಿಟ್ಟೂರು ವ್ಯಾಪ್ತಿಯಲ್ಲಿ ಭಾರೀ ಸುರಿಯುತ್ತಿದ್ದು, ಲಕ್ಷ್ಮಣ ತೀರ್ಥ ನದಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಬೇಗೂರು ಕೊಲ್ಲಿಯಲ್ಲಿ ನದಿಯ ಪ್ರವಾಹದಿಂದ ಗದ್ದೆ ಬಯಲುಗಳು ಮುಳುಗಡೆಯಾಗಿದೆ.
::: ಬರೆ ಕುಸಿತ :::
ಮಡಿಕೇರಿ ಸಮೀಪದ ತಾಳತ್‍ಮನೆ ಗ್ರಾಮದಲ್ಲಿ ಮನೆಯೊಂದರ ಹಿಂಭಾಗ ಬರೆ ಕುಸಿತವಾಗಿದ್ದು, ಯಾವುದೇ ಅನಾಹುತಗಳು ಸಂಭವಿಸಿಲ್ಲ. ಇಂದಿರಾನಗರ, ಚಾಮುಂಡೇಶ್ವರಿ ನಗರ, ಶ್ರೀಓಂಕಾರೇಶ್ವರ ದೇವಾಲಯ ರಸ್ತೆ ಮತ್ತು ಮಂಗಳೂರು ರಸ್ತೆಯ ವಿವಿಧ ಭಾಗಗಳಲ್ಲಿ ಬರೆ ಕುಸಿತವಾಗಿದೆ.
::: ಧರೆಗುರುಳಿದ ಮರಗಳು :::
ಮಡಿಕೇರಿ-ವೀರಾಜಪೇಟೆ ಮುಖ್ಯ ರಸ್ತೆಯ ಬೇತ್ರಿ, ಹಾಲುಗುಂದ ಮತ್ತು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಹಾಲುಗುಂದ ಗ್ರಾಮದ ಮುಖ್ಯ ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗುರುಳಿದೆ.
ಕೆ. ನಿಡುಗಣೆ ಪಂಚಾಯ್ತಿಯ ಹೆಬ್ಬೆಟ್ಟಗೇರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಉರುಳಿ ಬಿದ್ದ ಘಟನೆ ನಡೆದಿದೆ. ಸುಂಟಿಕೊಪ್ಪದ ಶಿವರಾಮ ಬಡಾವಣೆಯ ರಾಸಯ್ಯ ಎಂಬವರ ಮನೆಯ ಮೇಲಕ್ಕೆ ಭಾರೀ ಗಾತ್ರದ ಮರ ಉರುಳಿ ಬಿದ್ದು ಅಪಾರ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿರಾಜಪೇಟೆ ಸಮೀಪದ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ ರಸ್ತೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚೇ ಇದ್ದು, ವಿದ್ಯುತ್ ಕೊರತೆ ಎದುರಾಗಿದೆ. ನಗರದಲ್ಲಿ ಧಾರಾಕಾರ ಮಳೆಯೊಂದಿಗೆ ಚಳಿ ಗಾಳಿಯೂ ಇದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಬಿದ್ದ ಮರ ಮತ್ತು ಮಣ್ಣಿನ ರಾಶಿಯನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಆ.7 ರವರೆಗೆ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.
