ಕೊಡಗು ಜಿಲ್ಲೆಯ ಮಳೆ ವಿವರ

05/08/2020

ಮಡಿಕೇರಿ ಆ. 5 : ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ರಸ್ತೆಗೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿದ್ದು, ಮರ ತೆರವುಗೊಳಿಸುವ ಹಾಗೂ ವಿದ್ಯುತ್ ಕಂಬ ಸರಿಪಡಿಸುವ ಕಾರ್ಯ ನಡೆದಿದೆ.
ಕಾವೇರಿ ತ್ರಿವೇಣಿ ಸಂಗಮ ತುಂಬಿದ್ದು, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿದೆ. ಭಾರೀ ಮಳೆಯಿಂದ ಭಾಗಮಂಡಲದಿಂದ ಮಡಿಕೇರಿ ಮತ್ತು ನಾಪೋಕ್ಲು ಕಡೆಗೆ ತೆರಳುವ ರಸ್ತೆಯು ಜಲಾವೃತಗೊಂಡಿದ್ದು, ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.
ಮಡಿಕೇರಿ–ಚೆಟ್ಟಳ್ಳಿ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಸುವ ಸಂಬಂಧ ಅಬ್ಬಿಯಾಲದಿಂದ ಚೆಟ್ಟಳ್ಳಿವರೆಗೆ ವಾಹನ ಸಂಚಾರ ನಿಬರ್ಂಧಿಸಲಾಗಿತ್ತು. ಈ ಭಾಗದ ಸ್ಥಳೀಯರು ಕತ್ತಲೆಕಾಡು–ಸಿದ್ದಾಪುರ ಮಾರ್ಗದಲ್ಲಿ ವಾಹನಗಳ ಮೂಲಕ ಸಂಚರಿಸುತ್ತಿದ್ದು, ಈ ಭಾಗದಲ್ಲಿ ಭೂಕುಸಿತವಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ತಾತ್ಕಾಲಿಕವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿಬರ್ಂಧಿಸಲಾಗಿದ್ದು, ಸಾರ್ವಜನಿಕರು ಬದಲಿ ರಸ್ತೆಯಾದ ಹಾಕತ್ತೂರು-ಮರಗೋಡು–ಸಿದ್ದಾಪುರ ಮಾರ್ಗ ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸರಾಸರಿ 142 ಮಿ.ಮೀ. ಗೂ ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಹುದಿಕೇರಿಯಲ್ಲಿ 279.4 ಮಿ.ಮೀ. ಮಡಿಕೇರಿಯಲ್ಲಿ 227 ಮಿ.ಮೀ. ಹಾಗೆಯೇ ಶಾಂತಳ್ಳಿಯಲ್ಲಿ 220 ಮಿ.ಮೀ. ದಾಖಲೆ ಮಳೆಯಾಗಿದೆ.
ಹಾರಂಗಿಯಿಂದ ಹೆಚ್ಚಿನ ನೀರು ನದಿಗೆ; ಮುನ್ನೆಚ್ಚರಿಕೆ ವಹಿಸಲು ಮನವಿ: ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯದಿಂದ 10,689 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಈ ಪ್ರಮಾಣವು ಯಾವುದೇ ಸಂದರ್ಭದಲ್ಲೂ ಹೆಚ್ಚಾಗುವ ಸಂಭವವಿದೆ. ಆದ್ದರಿಂದ ಹಾರಂಗಿ ಮತ್ತು ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ/ ಪ್ರದೇಶಗಳಿಗೆ ತೆರಳುವಂತೆ ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ ಅವರು ಕೋರಿದ್ದಾರೆ.
ಮಳೆ ವಿವರ; ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 142.59 ಮಿ.ಮೀ. ಕಳೆದ ವರ್ಷ ಇದೇ ದಿನ 62.88 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1121.71 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 939.16 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 154.60 ಮಿ.ಮೀ. ಕಳೆದ ವರ್ಷ ಇದೇ ದಿನ 80.80 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1602.55 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1293.35 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 158 ಮಿ.ಮೀ. ಕಳೆದ ವರ್ಷ ಇದೇ ದಿನ 57.62 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1012.14 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 958.20 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 115.18 ಮಿ.ಮೀ. ಕಳೆದ ವರ್ಷ ಇದೇ ದಿನ 50.23 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 750.45 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 565.94 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 227, ನಾಪೋಕ್ಲು 126.20, ಸಂಪಾಜೆ 75, ಭಾಗಮಂಡಲ 190.20, ವಿರಾಜಪೇಟೆ ಕಸಬಾ 103.60, ಹುದಿಕೇರಿ 279.40, ಶ್ರೀಮಂಗಲ 144, ಪೊನ್ನಂಪೇಟೆ 195, ಅಮ್ಮತ್ತಿ 46, ಬಾಳೆಲೆ 180, ಸೋಮವಾರಪೇಟೆ ಕಸಬಾ 119.40, ಶನಿವಾರಸಂತೆ 117, ಶಾಂತಳ್ಳಿ 220, ಕೊಡ್ಲಿಪೇಟೆ 150.20, ಕುಶಾಲನಗರ 29.20, ಸುಂಟಿಕೊಪ್ಪ 55.30 ಮಿ.ಮೀ.ಮಳೆಯಾಗಿದೆ.