ಕೊಡಗಿನಲ್ಲಿ ಆ.10 ರವರೆಗೆ ಅತಿಮಳೆ : ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ

06/08/2020

ಮಡಿಕೇರಿ ಆ.6 : ಕಳೆದ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಆ.10 ರವರೆಗೂ ಇದು ಮುಂದುವರೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಅತಿಯಾದ ಮಳೆಯಿಂದ ಇಂದು ರೆಡ್ ಅಲರ್ಟ್‍ನೊಂದಿಗೆ ದಿನ ಕಳೆದ ಜಿಲ್ಲೆಯಲ್ಲಿ ಆ.6 ರ ಬೆಳಗ್ಗೆಯಿಂದ 7 ರ ಬೆಳಗ್ಗೆವರೆಗೆ ಆರೆಂಜ್ ಮತ್ತು ಆ.7 ರ ಬೆಳಗ್ಗೆಯಿಂದ ಆ.8 ರ ಬೆಳಗ್ಗೆವರೆಗೆ ಯೆಲ್ಲೋ ಮತ್ತು ಆ.8 ರ ಬೆಳಗ್ಗೆಯಿಂದ ಆ.10 ರವರೆಗೆ ಮತ್ತೆ ಆರೆಂಜ್ ಅಲರ್ಟ್‍ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಮುಂಗಾರು ಮಳೆಯು ಹೆಚ್ಚಾಗುವ ಸಂಭವ ಇದ್ದು, ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ : 24*7 ಕಂಟ್ರೋಲ್ ರೂಂ 08272-221077, ವಾಟ್ಸ್‍ಆಫ್ ನಂ. 8550001077 ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಕಡೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿದ್ದು, ಗುಡ್ಡ ಕುಸಿತವೂ ಉಂಟಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸಿತು.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹದ ಪರಿಸ್ಥಿತಿಯಿದ್ದು, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಭಾಗಮಂಡಲದಿಂದ ಮಡಿಕೇರಿ ಮತ್ತು ನಾಪೆÇೀಕ್ಲು ಕಡೆಗೆ ತೆರಳುವ ರಸ್ತೆಯು ಜಲಾವೃತಗೊಂಡಿದ್ದು, ಸಾರಿಗೆ ಸಂಪರ್ಕ ಕಡಿತಗೊಂಡಿದೆ.
ಮಡಿಕೇರಿ–ಚೆಟ್ಟಳ್ಳಿ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಸುವ ಸಂಬಂಧ ಅಬ್ಬಿಯಾಲದಿಂದ ಚೆಟ್ಟಳ್ಳಿವರೆಗೆ ವಾಹನ ಸಂಚಾರ ನಿಬರ್ಂಧಿಸಲಾಗಿತ್ತು. ಈ ಭಾಗದ ಸ್ಥಳೀಯರು ಕತ್ತಲೆಕಾಡು–ಸಿದ್ದಾಪುರ ಮಾರ್ಗದಲ್ಲಿ ವಾಹನಗಳ ಮೂಲಕ ಸಂಚರಿಸುತ್ತಿದ್ದು, ಈ ಭಾಗದಲ್ಲಿ ಭೂಕುಸಿತವಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ತಾತ್ಕಾಲಿಕವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿಬರ್ಂಧಿಸಲಾಗಿದ್ದು, ಸಾರ್ವಜನಿಕರು ಬದಲಿ ರಸ್ತೆಯಾದ ಹಾಕತ್ತೂರು-ಮರಗೋಡು–ಸಿದ್ದಾಪುರ ಮಾರ್ಗ ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
::: ಹಾರಂಗಿಯಿಂದ ನದಿಗೆ ನೀರು :::
ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯದಿಂದ 10,689 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಈ ಪ್ರಮಾಣವು ಯಾವುದೇ ಸಂದರ್ಭದಲ್ಲೂ ಹೆಚ್ಚಾಗುವ ಸಂಭವವಿದೆ. ಆದ್ದರಿಂದ ಹಾರಂಗಿ ಮತ್ತು ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ/ ಪ್ರದೇಶಗಳಿಗೆ ತೆರಳುವಂತೆ ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ ಅವರು ಕೋರಿದ್ದಾರೆ.
::: ಮಳೆ ವಿವರ :::
ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 142.59 ಮಿ.ಮೀ. ಕಳೆದ ವರ್ಷ ಇದೇ ದಿನ 62.88 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1121.71 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 939.16 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 154.60 ಮಿ.ಮೀ. ಕಳೆದ ವರ್ಷ ಇದೇ ದಿನ 80.80 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1602.55 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1293.35 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 158 ಮಿ.ಮೀ. ಕಳೆದ ವರ್ಷ ಇದೇ ದಿನ 57.62 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1012.14 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 958.20 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 115.18 ಮಿ.ಮೀ. ಕಳೆದ ವರ್ಷ ಇದೇ ದಿನ 50.23 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 750.45 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 565.94 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 227, ನಾಪೋಕ್ಲು 126.20, ಸಂಪಾಜೆ 75, ಭಾಗಮಂಡಲ 190.20, ವಿರಾಜಪೇಟೆ ಕಸಬಾ 103.60, ಹುದಿಕೇರಿ 279.40, ಶ್ರೀಮಂಗಲ 144, ಪೊನ್ನಂಪೇಟೆ 195, ಅಮ್ಮತ್ತಿ 46, ಬಾಳೆಲೆ 180, ಸೋಮವಾರಪೇಟೆ ಕಸಬಾ 119.40, ಶನಿವಾರಸಂತೆ 117, ಶಾಂತಳ್ಳಿ 220, ಕೊಡ್ಲಿಪೇಟೆ 150.20, ಕುಶಾಲನಗರ 29.20, ಸುಂಟಿಕೊಪ್ಪ 55.30 ಮಿ.ಮೀ.ಮಳೆಯಾಗಿದೆ.
::: ಹಾರಂಗಿ ನೀರಿನ ಮಟ್ಟ :::
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.94 ಅಡಿಗಳು, ಕಳೆದ ವರ್ಷ ಇದೇ ದಿನ 2833.29 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 31.20 ಮಿ.ಮೀ., ಕಳೆದ ವರ್ಷ ಇದೇ ದಿನ 13.40 ಮಿ.ಮೀ. ಇಂದಿನ ನೀರಿನ ಒಳಹರಿವು 7182 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1230 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 9425, ನಾಲೆಗೆ 595. ಕಳೆದ ವರ್ಷ ಇದೇ ದಿನ ನದಿಗೆ 1000, ನಾಲೆಗೆ 1200 ಕ್ಯುಸೆಕ್.