ಆರ್ ಎಸ್ ಎಸ್ ಕನಸು ನನಸಾಗಿದೆ

ಅಯೋಧ್ಯೆ ಆ.6 : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಳೆದ 30 ವರ್ಷಗಳಿಂದ ಈ ದಿನಕ್ಕಾಗಿ ಕೆಲಸ ಮಾಡುತ್ತಿತ್ತು. ಸ್ವಯಂ ಸೇವಕರ ಕನಸು ಇದೀಗ ನನಸಾಗಿದ್ದು ಭವ್ಯ ಭಾರತದ ಶ್ರೀಮಂತ ಸಂಸ್ಕೃತಿ ಸಾರುವ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಬಳಿಕ ಮಾತನಾಡಿದ ಅವರು, “ಎಲ್ಲರೂ ರಾಮರೇ, ಎಲ್ಲರಲ್ಲೂ ರಾಮನೇ ಇದ್ದಾನೆ. ರಾಮ ಮಂದಿರನವನ್ನು ಇಲ್ಲಿಯೇ ಕಟ್ಟೋಣ. ನಮ್ಮ ಹೃದಯಗಳನ್ನು ಅಯೋಧ್ಯೆ ಮಾಡಿಕೊಳ್ಳೋಣ ಎಂದು ಹೇಳಿದರು. ಅಂತೆಯೇ “ಧರ್ಮ ಎಲ್ಲರನ್ನೂ ಮೇಲ್ಮೆಗೆ ತರುತ್ತದೆ. ವಿಶ್ವಕ್ಕೇ ಭಾರತವು ಸುಖ ಶಾಂತಿ ತರಬಲ್ಲದು. ನಾವು ಭಾರತೀಯರು ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿದ್ದೇವೆ. ಇಡೀ ವಿಶ್ವವೇ ಒಂದು ಕುಟುಂಬವಾಗಿದ್ದು, ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಇಂದು ನವ ಭಾರತದ ಆರಂಭವಾಗಿದೆ. ನಾವು ಅಯೋಧ್ಯೆಯಲ್ಲಿ ಮಂದಿರ ಕಟ್ಟಿ ಸುಮ್ಮನಾಗಬಾರದು. ಅದಕ್ಕೂ ಮೊದಲು ಮನ ಮಂದಿರ ಕಟ್ಟಬೇಕು. ಅತಿ ಆಸೆ, ವಿಪರೀತ ಸಿಟ್ಟು, ಜಿಪುಣತನದಂಥ ಸಮಾಜಕಂಟಕ ಸ್ವಭಾಗಳನ್ನು ದೂರವಿಡಲು ರಾಮನ ಆದರ್ಶಗಳಿಂದ ಸ್ಪೂರ್ತಿ ಪಡೆಯೋಣ ಎಂದು ಹೇಳಿದರು.
