ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಆ. 6 : ಪ್ರಸಕ್ತ(2020-21) ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಹಾಗೂ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶ ನಿಗಮಗಳಿಂದ ಪರಿಶಿಷ್ಟ ಜಾತಿ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಕೈಗೊಳ್ಳಲು ನೇರಸಾಲ ಯೋಜನೆಯಡಿ ತರಕಾರಿ, ಹಣ್ಣು-ಹಂಪಲು ಮಾರಾಟ ಮತ್ತು ಹಸು, ಎಮ್ಮೆ, ಕುರಿ, ಹಂದಿ, ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನಿಗಮಗಳಿಂದ ನೇರಸಾಲ ಯೋಜನೆಯ ಘಟಕ ವೆಚ್ಚ ಗರಿಷ್ಟ ರೂ.50 ಸಾವಿರದಲ್ಲಿ ಶೇ.50 ಸಾಲ ಮತ್ತು ಶೇ.50 ಸಹಾಯಧನ ನೀಡಲಾಗುವುದು.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ಐ.ಎಸ್.ಬಿ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಗರಿಷ್ಟ ಸಹಾಯಧನ ರೂ.1 ಲಕ್ಷ ಉಳಿದ ಮೊತ್ತ ಬ್ಯಾಂಕ್ ಸಾಲ.
ಮೈಕ್ರೊ ಕ್ರೆಡಿಟ್ (ಪ್ರೇರಣಾ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ) ಯೋಜನೆ: ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯಗಳಿಸುವ ಉತ್ಪಾದನ /ಸೇವಾ ಘಟಕಗಳನ್ನು ಆರಂಬಿಸಲು ಒಂದು ಗುಂಪಿಗೆ ಕನಿಷ್ಟ ರೂ. 2.50 ಲಕ್ಷ ಸಹಾಯಧನ / ಸಾಲ ಸೌಲಭ್ಯ ನೀಡಲಾಗುವುದು. ಗಂಗಾ ಕಲ್ಯಾಣ ಯೋಜನೆ: ಖುಷ್ಕಿ ಜಮೀನು ಹೊಂದಿರುವ ಸಣ್ಣ/ ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. (ಕನಿಷ್ಠ 1 ಏಕರೆ, ಗರಿಷ್ಠ 5 ಏಕರೆ ಖುಷ್ಕಿ ಜಮೀನು ಹೊಂದಿರಬೇಕು). ಭೂ ಒಡೆತನ ಯೋಜನೆ: ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿಗೆ ಯೋಗ್ಯವಾದ ಜಮೀನು ಖರೀದಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ ನೀಡಲಾಗುವುದು. ಅರ್ಜಿಯನ್ನು http://adcl.karnataka.gov.in, http://adijambava.karnataka.gov.in, http://ksskdc.kar.nic.in, http://banjarathanda.kar.nic.in/ ಆಯಾ ನಿಗಮದ ವೆಬ್‍ಸೈಟ್‍ಗಳಲ್ಲಿ ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಆಯಾಯ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ರೇಸ್‍ಕೋರ್ಸ್ ರಸ್ತೆ, ಹೊಸ ಬಡಾವಣೆ, ಮಡಿಕೇರಿ, ಕೊಡಗು ಜಿಲ್ಲೆ, ದೂ.08272-228857 ನ್ನು ಸಂಪರ್ಕಿಸಬಹುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
