ಕೊಡಗಿನಲ್ಲಿ ಆರ್ಭಟ ನಿಲ್ಲಿಸದ ಆಶ್ಲೇಷ : ಹಲವು ಕಡೆ ಭೂಕುಸಿತ : ತಲಕಾವೇರಿ ಕಾರ್ಯಾಚರಣೆಗೆ ಅಡ್ಡಿ

ಮಡಿಕೇರಿ ಆ.7 : ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಆರ್ಭಟ ಮುಂದುವರೆದಿದ್ದು, ಹಲವು ಕಡೆ ಭೂಕುಸಿತ ಉಂಟಾಗಿದೆ. ಪ್ರವಾಹ ಪರಿಸ್ಥಿತಿಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ ನೂರಾರು ಮನೆಗಳು ಜಲಾವೃತಗೊಂಡು ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. ಬ್ರಹ್ಮಗಿರಿ ಬೆಟ್ಟಕುಸಿದು ಐವರು ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ತಲಕಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಪತ್ತೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಜೆಸಿಬಿ ಮತ್ತು ಇಟಾಚಿ ಯಂತ್ರಗಳನ್ನು ದುರಂತ ನಡೆದ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಾಗಿ ಪ್ರವಾಹದ ನೀರು ತಗ್ಗಿದರೆ ಶನಿವಾರ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ಕೊಡಗನ್ನು ಆಗಸ್ಟ್ ತಿಂಗಳ ಆಶ್ಲೇಷ ಮಳೆಯೇ ಕಾಡುತ್ತಿದ್ದು, ಕಾಕತಾಳೀಯ ಎಂಬಂತೆ ಪ್ರಸ್ತುತ ವರ್ಷವೂ ಆಗಸ್ಟ್ ಮೊದಲ ವಾರದಲ್ಲೇ ಆರ್ಭಟಿಸಿದ ಆಶ್ಲೇಷ ಐವರನ್ನು ಬಲಿ ತೆಗೆದುಕೊಂಡಿದೆ.
::: ಸಚಿವ ಸೋಮಣ್ಣ ಭೇಟಿ :::
ತಲಕಾವೇರಿ ಸಮೀಪ ಬ್ರಹ್ಮಗಿರಿ ಬೆಟ್ಟ ಕುಸಿದಿರುವ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವÀ ವಿ.ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಭೂ ಕುಸಿತ ಪ್ರದೇಶ ಕಂಡು ನೋವು ವ್ಯಕ್ತಪಡಿಸಿದ ಸಚಿವರು, ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತದಿಂದ ತಲಕಾವೇರಿ ದೇವಾಲಯ ಪ್ರಧಾನ ಅರ್ಚಕರಾಗಿದ್ದ ನಾರಾಯಣಾಚಾರ್ ಕುಟುಂಬ ಮೂವರು ಮತ್ತು ಸಹ ಅರ್ಚಕರು ಇಬ್ಬರು ಸೇರಿ, ಒಟ್ಟು 5 ಮಂದಿ ಕಣ್ಮರೆಯಾಗಿದ್ದು, ಮಳೆ ಕಡಿಮೆಯಾದ ತಕ್ಷಣ ಕಾರ್ಯಾಚರಣೆ ಆರಂಭಿಸಲಾಗುವುದು. ಈಗಾಗಲೇ ಎನ್‍ಡಿಆರ್‍ಎಫ್ ತಂಡ ಬೀಡು ಬಿಟ್ಟಿದೆ ಎಂದು ಸಚಿವರು ತಿಳಿಸಿದರು.
ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಎನ್‍ಡಿಆರ್‍ಎಫ್ ತಂಡ ಜಿಲ್ಲೆಯಲ್ಲಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹಾಗೆಯೇ ವಿದ್ಯುತ್ ಮಾರ್ಗ ಸರಿಪಡಿಸುವುದು, ಮರಗಳು ರಸ್ತೆ ಮತ್ತು ವಿದ್ಯುತ್ ಕಂಬಕ್ಕೆ ತುಂಡಾಗಿ ಬದ್ದಲ್ಲಿ ತಕ್ಷಣವೇ ತೆರವು ಮಾಡುವ ಕಾರ್ಯ ನಡೆಯುತ್ತಿದೆ. ರಸ್ತೆ ಭಾಗದಲ್ಲಿ ಬರೆ ಕುಸಿದಲ್ಲಿ ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ವಿ.ಸೋಮಣ್ಣ ಅವರು ವಿವರಿಸಿದರು.
ಪ್ರಕೃತಿ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಿದೆ. ಮುಖ್ಯಮಂತ್ರಿ ಅವರು ಯಾವುದೇ ತೊಂದರೆ ಆಗದಂತೆ ಗಮನ ಹರಿಸಬೇಕು ಎಂದು ಸೂಚಿದ್ದಾರೆ. ಆ ದಿಸೆಯಲ್ಲಿ ಜಿಲ್ಲೆಯ ಯಾವ ಯಾವ ಪ್ರದೇಶದಲ್ಲಿ ತೊಂದರೆಯಾಗುತ್ತಿದೆ ಅಂತಹ ಪ್ರದೇಶದ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಸೇರಿದಂತೆ ಇತರ ಅಪಾಯಕಾರಿ ಸ್ಥಳದಿಂದ ಅಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದರು.
ಎಸ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ತಂಡ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಜಿಲ್ಲೆಯ ಜನರು ಹೆದರುವ ಅಗತ್ಯವಿಲ್ಲ ಎಚ್ಚರಿಕೆಯಿಂದಿರಿ ಎಂದು ಸಚಿವರು ಸಲಹೆ ನೀಡಿದರು.
ಪ್ರಧಾನ ಅರ್ಚಕರು ಅಧಿಕಾರಿಗಳ ಮಾತನ್ನು ಕೇಳಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಕಳೆದ ಬಾರಿ ತೋರಾದಲ್ಲಿ ಆದಂತೆಯೇ ಇಲ್ಲಿಯೂ ಅನಾಹುತ ಆಗಿದೆ. ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಜನರನ್ನು ಸುರಕ್ಷಿತವಾಗಿ ಇರಿಸಲಾಗಿದೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ಕೊರೊನಾ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದವರನ್ನು ಪರಿಹಾರ ಕೇಂದ್ರದಲ್ಲಿ ಇರಿಸುತ್ತೇವೆ. ಪಾಸಿಟಿವ್ ಬಂದರೆ ನೇರವಾಗಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಣ ಮುಖ್ಯ ಅಲ್ಲ, ಜನರ ಜೀವ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ವಿ.ಸೋಮಣ್ಣ ಹೇಳಿದರು.
ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ ಕೊಡಗು ಜಲ್ಲೆಯಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಸುರಿದು ಸಂಕಷ್ಟಗಳು ಎದುರಾಗುತ್ತಿವೆ. ಆದ್ದರಿಂದ ಕೊಡಗು ಜಿಲ್ಲೆಗೆ ಪ್ರತಿ ವರ್ಷ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಬ್ರಹ್ಮಗಿರಿ ಬೆಟ್ಟದಲ್ಲಿ ವ್ಯಾಪಕ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಭಾಗಮಂಡಲದಿಂದ ತಲಕಾವೇರಿ ವರೆಗೆ ಅಲ್ಲಲ್ಲಿ ಬರೆ ಕುಸಿಯುತ್ತಿದೆ ಎಂದು ಅವರು ತಿಳಿಸಿದರು.
ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಅವರು ಮಾತನಾಡಿ ಕಳೆದ ಮೂರು ವರ್ಷದಿಂದ ಪ್ರಕೃತಿ ವಿಕೋಪದಿಂದ ಜಿಲ್ಲೆಗೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷರಾದÀ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕ್ಷಮಾ ಮಿಶ್ರಾ ಹಾಜರಿದ್ದರು.
::: ಬೋಟ್ ಬಳಕೆ :::
ತ್ರಿವೇಣಿ ಸಂಗಮ ಪ್ರದೇಶವು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಭಾಗಮಂಡಲದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ತಲಕಾವೇರಿಯ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಬೋಟ್ ಮೂಲಕ ಭಾಗಮಂಡಲದ ಮತ್ತೊಂದು ಬದಿ ತಲುಪಿದ ಸಚಿವ ಸೋಮಣ್ಣ ಹಾಗೂ ಇತರರು ರಸ್ತೆ ಮಾರ್ಗವಾಗಿ ತಲಕಾವೇರಿಗೆ ತೆರಳಿದರು. ತಲಕಾವೇರಿ ಭೂ ಕುಸಿತ ಪ್ರದೇಶ ವೀಕ್ಷಣೆ ನಂತರ ಭಾಗಮಂಡಲದಲ್ಲಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಜತೆ ಮಾತನಾಡಿದರು.
::: ಆರೆಂಜ್ ಅಲರ್ಟ್ ಘೋಷಣೆ :::
ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಆ.8 ರ ಬೆಳಗ್ಗೆಯಿಂದ ಆ.11 ರ ಬೆಳಗ್ಗೆವರೆಗೆ ಆರೆಂಜ್ ಅಲರ್ಟ್‍ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಮಳೆಯ ಹೆಚ್ಚಾಗುವ ಸಂಭವ ಇದ್ದು, ಆಗಾಗ್ಗೆ ಹೊರಡಿಸುವ ಹವಾಮಾನ ಮುನ್ಸೂಚನೆಗಳನ್ನು ಗಮನಿಸಲು ಕೋರಿದೆ. ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24*7 ಕಂಟ್ರೋಲ್ ರೂಂ 08272-221077 ವಾಟ್ಸ್‍ಪ್ ಸಂಖ್ಯೆ 8550001077 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
::: ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜು :::
ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಅಗ್ನಿಶಾಮಕ ಇಲಾಖೆ ಸಂಪೂರ್ಣ ಸಜ್ಜುಗೊಂಡಿದೆ ಎಂದು ಮೈಸೂರು ಪ್ರಾಂತ್ಯದ ಅಗ್ನಿಶಾಮಕ ಅಧಿಕಾರಿ ಸಿ.ಗುರುಲಿಂಗಯ್ಯ ಅವರು ತಿಳಿಸಿದ್ದಾರೆ.
ಭಾಗಮಂಡಲದಲ್ಲಿ ಶುಕ್ರವಾರ ಮಾತನಾಡಿದ ಅವರು ಪ್ರವಾಹ ಪರಿಸ್ಥಿತಿ ಎದುರಿಸುವ ಸಂಬಂಧ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿನ ನದಿ ಪಾತ್ರದ ಭಾಗದಲ್ಲಿ ಮತ್ತು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಅಗ್ನಿಶಾಮಕ ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂದರು.
ಜಿಲ್ಲೆಯಲ್ಲಿ 60 ಜನರ ತಂಡವಿದ್ದು, ಮಂಗಳೂರಿನಿಂದ 20 ಮತ್ತು ಬೆಂಗಳೂರಿನಿಂದ 23 ಜನರ ಹೆಚ್ಚುವರಿ ಎಸ್‍ಡಿಆರ್ ಎಫ್ ತಂಡ ಕರೆಸಿಕೊಳ್ಳಲಾಗಿದೆ. ಅಲ್ಲದೆ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮತ್ತು ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ ಜಿಲ್ಲಾ ಅಗ್ನಿಶಾಮಕ ಸಿಬ್ಬಂದಿಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈಜುವುದು ಮತ್ತು ಪ್ರವಾಹ ನಿರ್ವಹಣೆಯಲ್ಲಿ ಸಿಬ್ಬಂದಿಗಳು ತರಬೇತಿ ಪಡೆದಿದ್ದು, ಒಡಿಸ್ಸಾದಲ್ಲಿ ಈ ತಂಡಕ್ಕೆ ಕಠಿಣ ತರಬೇತಿ ನೀಡಲಾಗಿದೆ. ಸಕಲ ರಕ್ಷಣಾ ಸಲಕರಣೆಗಳೊಂದಿಗೆ 24 ಗಂಟೆಗಳ ಕಾಲವು ಅಗ್ನಿಶಾಮಕ ತಂಡ ಸಿದ್ಧವಾಗಿದೆ ಎಂದು ಮೈಸೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಸಿ.ಗುರುಲಿಂಗಯ್ಯ ಅವರು ಮಾಹಿತಿ ನೀಡಿದರು.