ಮಳೆಹಾನಿ ಸಂಕಷ್ಟವನ್ನು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ : ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್

ಮಡಿಕೇರಿ ಆ.8 : ಕೊಡಗು ಜಿಲ್ಲೆ ಮತ್ತೆ ಮಹಾಮಳೆಯ ಸಂಕಷ್ಟಕ್ಕೆ ಸಿಲುಕಿದ್ದು, ಜನರ ನೋವಿಗೆ ಸ್ಪಂದಿಸಲು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಸಂಘ, ಸಂಸ್ಥೆಗಳು ಒಗ್ಗೂಡಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ಧಾರಾಕಾರ ಮಳೆಯಿಂದ ಪ್ರವಾಹಕ್ಕೆ ಸಿಲುಕಿರುವ ಮತ್ತು ಭೂಕುಸಿತದಿಂದ ಅಪಾಯವನ್ನು ಎದುರಿಸುತ್ತಿರುವ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆ ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿ ಹೋಗಿದ್ದು, ತುರ್ತು ನೆರವಿನ ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ವಿಶೇಷ ಅನುದಾನ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಬೇಕು. ಜಿಲ್ಲೆಯಲ್ಲಿ ಸಾವಿರಾರು ಎಕರೆ ತೋಟ ಹಾಗೂ ಗದ್ದೆಗಳು ಕೂಡ ಸಂಪೂರ್ಣವಾಗಿ ನಾಶವಾಗಿದ್ದು, ಕೃಷಿಕರಿಗೂ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕೆಂದು ಗಣೇಶ್ ಒತ್ತಾಯಿಸಿದರು.
2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರ ನೋವಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಅವರು, ಇದೀಗ ಮತ್ತೆ ಮಹಾಮಳೆಯಿಂದ ಜಿಲ್ಲೆ ಸಂಕಷ್ಟಕ್ಕೆ ಸಿಲುಕಿದ್ದು, ತುರ್ತು ನೆರವಿನ ಅಗತ್ಯವಿದೆ ಎಂದರು. ಪ್ರತಿವರ್ಷ ಕೊಂಡಂಗೇರಿ ಗ್ರಾಮ ಸಂಪೂರ್ಣವಾಗಿ ಜಲಾವೃಗೊಳ್ಳುತ್ತಿದ್ದರೂ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು.
ಜಲಾವೃತಗೊಂಡಿರುವ ಕೊಂಡಂಗೇರಿ ಗ್ರಾಮ, ಬೇತ್ರಿ, ಬೊಟ್ಲಪ್ಪ ಪೈಸಾರಿ, ಕಡಗಾದಳುವಿನ ತುರ್ಕರಟ್ಟಿ, ಮೂರ್ನಾಡು ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಗಣೇಶ್ ಹಾಗೂ ಜೆಡಿಎಸ್ ಪ್ರಮುಖರು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು, ಅಲ್ಲದೆ ಆರ್ಥಿಕ ನೆರವು ನೀಡಿದರು.
ಈ ಸಂದರ್ಭ ಕೊಂಡಂಗೇರಿಯ ಸಂತ್ರಸ್ತರೊಬ್ಬರು ಮಾತನಾಡಿ, 2019ರಲ್ಲಿ ಸುರಿದ ಮಹಾಮಳೆಯಿಂದ ಗ್ರಾಮ ಸಂಪೂರ್ಣ ಜಲಾವೃತಗೊಂಡು ಸುಮಾರು 15 ಮನೆಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ ಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ, ಇದೀಗ ಗ್ರಾಮ ಮತ್ತೆ ಜಲಾವೃತಗೊಂಡಿದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಾಶ್ವತ ಪರಿಹಾರಕ್ಕಾಗಿ ಮನವಿ ಮಾಡಿದರು.


