ಮಳೆಹಾನಿ : ವಿಶೇಷ ತಜ್ಞರ ಸಮಿತಿ ರಚನೆಗೆ ಕುಶಾಲನಗರ ಪ್ರವಾಹ ಸಂತ್ರಸ್ಥರ ವೇದಿಕೆ ಒತ್ತಾಯ

08/08/2020

ಮಡಿಕೇರಿ ಆ. 8: ಪ್ರವಾಹ ಉಂಟಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಕೂಡಲೆ ವಿಶೇಷ ತಜ್ಞರ ಸಮಿತಿಯೊಂದನ್ನು ರಚಿಸುವ ಭರವಸೆಯನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ನೀಡಿದ್ದಾರೆ. ಕುಶಾಲನಗರದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಸತತವಾಗಿ ಮೂರನೇ ವರ್ಷ ಪ್ರವಾಹ ಪರಿಸ್ಥಿತಿ ಎದುರಾಗುವುದರೊಂದಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಳ್ಳುತ್ತಿರುವ ಬಗ್ಗೆ ಕುಶಾಲನಗರ ಪ್ರವಾಹ ಸಂತ್ರಸ್ಥರ ವೇದಿಕೆಯ ಪ್ರಮುಖರು ಉಸ್ತುವಾರಿ ಸಚಿವರಿಗೆ ಮನವಿ ನೀಡಿದ ಸಂದರ್ಭ ಮಾತನಾಡಿದ ಸಚಿವರು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತಜ್ಞರ ಸಮಿತಿ ನೇಮಿಸಲು ಕ್ರಮಕೈಗೊಳ್ಳಲಾಗುವುದು. ಆ ಮೂಲಕ ಕಾವೇರಿ ನದಿಯ ಸಮಗ್ರ ಮಾಹಿತಿ ಕಲೆಹಾಕಿ ನದಿ ನಿರ್ವಹಣೆ ಮತ್ತು ಪ್ರವಾಹ ತಡೆಯಲು ಅವಶ್ಯವಿರುವ ಯೋಜನೆ ಸಿದ್ದಪಡಿಸಲಾಗುವುದು, ಒಂದು ತಿಂಗಳೊಳಗೆ ಈ ಕೆಲಸ ನಡೆಸಲಾಗುವುದು ಎಂದರು. ಕಳೆದ ಮೂರು ವರ್ಷಗಳಿಂದ ಹಾರಂಗಿ ಮತ್ತು ಕಾವೇರಿ ನದಿ ಉಕ್ಕಿ ಹರಿದು ತಗ್ಗು ಪ್ರದೇಶಗಳ ಬಡಾವಣೆಗಳ ಜನರು ಸಮಸ್ಯೆಗೆ ಒಳಗಾಗುವುದರೊಂದಿಗೆ ಜನಜೀವನ ಏರುಪೇರಾಗುತ್ತಿದೆ. ಮನೆಗಳು ಜಲಾವೃತಗೊಳ್ಳುವುದರೊಂದಿಗೆ ನಾಗರಿಕರ ಆಸ್ತಿಪಾಸ್ತಿಗೆ ಹಾನಿಯಾಗುತ್ತಿದೆ. ಅಲ್ಲದೆ ಬಡಾವಣೆಗಳ ಮನೆಗಳು ಮುಳುಗುತ್ತಿರುವ ಕಾರಣ ಕಟ್ಟಡಗಳು ಕುಸಿದು ಮುಂದಿನ ದಿನಗಳಲ್ಲಿ ಭಾರೀ ಜೀವಹಾನಿಗಳು ಉಂಟಾಗುವ ಸಾದ್ಯತೆಯಿದೆ. ಸರಕಾರದ ಮೂಲಕ ತಜ್ಞರ ಸಮಿತಿ ವರದಿ ಅಧರಿಸಿ ಶಾಶ್ವತ ಕ್ರಮಕೈಗೊಳ್ಳಲು ಪ್ರವಾಹ ಸಂತ್ರಸ್ಥರ ವೇದಿಕೆ ಪ್ರಮುಖರು ಮನವಿ ಪತ್ರದಲ್ಲಿ ಕೋರಿದ್ದಾರೆ.
ಸಂತ್ರಸ್ಥರ ವೇದಿಕೆಯ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್, ಉಪಾಧ್ಯಕ್ಷ ತೋರೇರ ಉದಯಕುಮಾರ್, ಕೊಡಗನ ಹರ್ಷ, ವಿನಯ್ ಕಾರ್ಯಪ್ಪ ಇದ್ದರು.