ತಲಕಾವೇರಿಯಲ್ಲಿ ಆನಂದತೀರ್ಥರ ಮೃತದೇಹ ಪತ್ತೆ : ಕಾರ್ಯಾಚರಣೆಗೆ ಮಳೆ ಅಡ್ಡಿ

08/08/2020

ಮಡಿಕೇರಿ ಆ.8 : ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಮನೆಗಳೆರಡು ನೆಲಸಮಗೊಂಡು ನಾಪತ್ತೆಯಾದ ಐವರಲ್ಲಿ ಓರ್ವರ ಮೃತದೇಹ ಪತ್ತೆಯಾಗಿದೆ.
ಮೃತರು ಆನಂದ ತೀರ್ಥ(86) ಎಂದು ಗುರುತಿಸಲಾಗಿದ್ದು, ಉಳಿದ ನಾಲ್ವರ ಪತ್ತೆ ಕಾರ್ಯ ಮಳೆಯ ನಡುವೆಯೂ ಚುರುಕೊಂಡಿದೆ. ಪ್ರಧಾನ ಅರ್ಚಕ ನಾರಾಯಣ ಆಚಾರ್, ಪತ್ನಿ ಶಾಂತ, ಸಹಾಯಕ ಶ್ರೀನಿವಾಸ ಹಾಗೂ ರವಿಕಿರಣ್ ಅವರಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಎನ್‍ಡಿಆರ್‍ಎಫ್ ತಂಡ ನಿರತವಾಗಿದೆ. ಆ.6 ರಂದು ರಾತ್ರಿ ದುರ್ಘಟನೆ ನಡೆದು ಶುಕ್ರವಾರವೇ ಕಾರ್ಯಾಚರಣೆ ನಡೆಯಬೇಕಾಗಿತ್ತಾದರೂ ಭಾರೀ ಗಾಳಿ, ಮಳೆ ಅಡ್ಡಿಯಾಗಿತ್ತು. ಇಂದು ಕೂಡ ಸಾಧಾರಣ ಮಳೆಯಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಸೂಚನೆಯಂತೆ ಸ್ಥಳೀಯರ ಸಹಕಾರದೊಂದಿಗೆ ಆನಂದ ತೀರ್ಥರ ಮೃತ ದೇಹವನ್ನು ಪತ್ತೆ ಹಚ್ಚುವಲ್ಲಿ ಎನ್‍ಡಿಆರ್‍ಎಫ್ ತಂಡ ಯಶಸ್ವಿಯಾಯಿತು. ಪೊಲೀಸ್ ಇಲಾಖೆ ಕೂಡ ಸಹಕಾರ ನೀಡಿತು.
ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಜೆಸಿಬಿ ಮತ್ತು ಇಟಾಚಿ ಯಂತ್ರಗಳ ಅವಶ್ಯಕತೆ ಇದ್ದು, ಭಾಗಮಂಡಲದಲ್ಲಿ ಪ್ರವಾಹದ ನೀರು ತಗ್ಗದೆ ಇರುವುದರಿಂದ ವಾಹನಗಳ ಸಂಚಾರ ಅಸಾಧ್ಯವಾಗಿದೆ.