ಕುಶಾಲನಗರ ಪ್ರವಾಹ ಪೀಡಿತ ಪ್ರದೇಶಗಳಿಗೆ ವಿ.ಸೋಮಣ್ಣ ಭೇಟಿ

08/08/2020

ಮಡಿಕೇರಿ ಆ.8 : ಕುಶಾಲನಗರ ಪ್ರವಾಹ ಪೀಡಿತ ಪ್ರದೇಶ ಕುವೆಂಪು ಹಾಗೂ ಸಾಯಿ ಬಡಾವಣೆಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿ ನಿವಾಸಿಗಳ ಅಹವಾಲು ಆಲಿಸಿದರು.
ಬಡಾವಣೆಗಳಿಗೆ ಪ್ರವಾಹ ಉಂಟಾಗದಂತೆ ತಡೆಯುವ ನಿಟ್ಟಿನಲ್ಲಿ ಶಾಶ್ವತ ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತರಿಸಲಾಗುವುದು ಎಂದರು.
ಇದೇ ವೇಳೆ ಕುಶಾಲನಗರ-ಕೊಪ್ಪ ಸೇತುವೆಯಲ್ಲಿ ಉಕ್ಕಿ ಹರಿಯುತ್ತಿರುವ ಕಾವೇರಿ ನದಿಯನ್ನು ವಿ.ಸೋಮಣ್ಣ ಅವರು ವೀಕ್ಷಿಸಿದರು. ಶಾಸಕರಾದ ಅಪ್ಪಚ್ಚು ರಂಜನ್, ಸಂಸದರಾದ ಪ್ರತಾಪ್ ಸಿಂಹ ಇತರರು ಹಾಜರಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕುಶಾಲನಗರದ ಪ್ರವಾಹ ಪೀಡಿತ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಪ್ರವಾಹ ತಡೆಯುವ ನಿಟ್ಟಿನಲ್ಲಿ ಸೂಕ್ತ ಸರ್ವೇ ಮಾಡಿಸಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಪ್ರವಾಹ ಪೀಡಿತ ಪ್ರದೇಶದಲ್ಲಿ ಸರಾಗವಾಗಿ ನೀರು ಹರಿಯುವಂತೆ ಏರಿ ಎತ್ತರ ಮಾಡುವುದು, ಮಳೆ ನೀರು ಬರದಂತೆ ಹೂಳು ತೆಗೆಸುವುದು ಮತ್ತಿತರ ಕಾರ್ಯ ಮಾಡಲಾಗುವುದು. ಚರಂಡಿ ಸ್ವಚ್ಛ ಗೊಳಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಶಾಸಕರಾದ ಅಪ್ಪಚ್ಚು ರಂಜನ್ ಅವರು ಮಾತನಾಡಿ ಹೂಳು ತೆಗೆಯಲು ಹೋದರೆ ನ್ಯಾಯಾಲಯಕ್ಕೆ ಹೋಗುತ್ತಾರೆ. ಏನಾದರೊಂದು ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶ ನಮ್ಮದು. ಎಲ್ಲದಕ್ಕೂ ಅಡೆತಡೆ ಉಂಟು ಮಾಡುವವರಿದ್ದಾರೆ. ಈ ಬಗ್ಗೆ ಆತ್ಮಾವಲೋಕನ ಮಾಡಬೇಕಿದೆ ಎಂದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ, ಕುಶಾಲನಗರ ಪ್ರವಾಹ ಪೀಡಿತ ಪ್ರದೇಶದಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದು ಅವರು ತಿಳಿಸಿದರು.
ತಹಶೀಲ್ದಾರರಾದ ಗೋವಿಂದ ರಾಜು, ಪ.ಪಂ.ಮುಖ್ಯಾಧಿಕಾರಿ ಸುಜಯ್ ಕುಮಾರ್, ಡಿವೈಎಸ್‍ಪಿ ಶೈಲೇಂದ್ರ ಕುಮಾರ್, ಇನ್ಸ್‍ಪೆಕ್ಟರ್ ಮಹೇಶ್ ಇತರರು ಇದ್ದರು.