ಮಹಾಮಳೆಯಿಂದಾದ ಬೆಳೆ ನಷ್ಟದ ಸರ್ವೆ ಮಾಡಿ : ಉಸ್ತುವಾರಿ ಸಚಿವ ವಿ.ಸೋಮಣ್ಣ ನಿರ್ದೇಶನ

ಮಡಿಕೇರಿ ಆ.8 : ಬೆಳೆಹಾನಿ ಪರಿಹಾರ ಸಂಬಂಧ ಮತ್ತು ಕಾಫೀ, ಕರಿಮೆಣಸು ಮತ್ತು ಜಿಲ್ಲೆಯಲ್ಲಿ ಹಾನಿಗೊಳಗಾದ ಬೆಳೆಗಳ ಸರ್ವೆ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿರ್ದೇಶನ ನೀಡಿದರು.
ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಯಾವುದೇ ದೂರುಗಳು ಬರದಂತೆ ಎಚ್ಚರ ವಹಿಸಬೇಕು ಎಂದರು.
ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಕೆಲಸ ನಿರ್ವಹಣೆ ಸಾಧ್ಯ, ಒಬ್ಬರಿಗೊಬ್ಬರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. 5 ಮಂದಿ ನಾಪತ್ತೆ ಆಗಿರುವ ಘಟನೆಗೆ ಸಂಬಂಧಿಸಿದಂತೆ ಎಲ್ಲೋ ಒಂದು ಕಡೆ ನಾವು ಎಡವಿದ್ದೇವೆ ಎನಿಸುತ್ತದೆ ಎಂದು ಸಚಿವರು ನುಡಿದರು
ಯಾವ ಯಾವ ಹಂತದ ಅಧಿಕಾರಿಗಳಿಗೆ ಕೆಲಸ ವಹಿಸಲಾಗಿದೆ ಅವರು ನಿಭಾಯಿಸಬೇಕು. ದುಗುಡ ಕಡಿಮೆ ಮಾಡಲು ಸವಾಲುಗಳನ್ನು ಎದುರಿಸಬೇಕು. ಸರ್ಕಾರ ಎಂದರೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಜಿಲ್ಲೆಯ ಜನರಲ್ಲಿ ವಿಶ್ವಾಸ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ತಡೆಗೋಡೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಕಾಫೀ ಬೆಳೆ ನಷ್ಟ ಸಂಬಂಧಿಸಿದಂತೆ ನಿಖರ ಮಾಹಿತಿ ನೀಡುವಂತೆ ಸೂಚಿಸಿದರು. ರೈತರಿಗೆ ತೊಂದರೆ ಆಗದಂತೆ ಗಮನಹರಿಸಬೇಕು ಎಂದರು ಅಲ್ಲದೆ ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ಪಡೆದರು.
ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಮಾತನಾಡಿ ಜಿಲ್ಲೆಯಲ್ಲಿ ಹಾನಿಗೊಳಗಾದ ಭಾಗಮಂಡಲ, ಸಂಪಾಜೆ ಭಾಗದ ರಸ್ತೆಗಳನ್ನು ಶೀಘ್ರವೇ ಸರಿಪಡಿಸಿ ಎಂದು ಸೂಚಿಸಿದರು.
ಬಿಎಸ್‍ಎನ್‍ಎಲ್ ಸೇವೆಯನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ವಿಳಂಭ ಮಾಡಬಾರದು ಎಂದು ಸಂಸದರು ನಿರ್ದೇಶನ ನೀಡಿದರು.
ಬಿಎಸ್‍ಎನ್‍ಎಲ್ ವತಿಯಿಂದ ಟವರ್‍ಗಳನ್ನು ಆರಂಭಿಸಿ. ಹಳ್ಳಿಗಳ ಪ್ರದೇಶದಲ್ಲಿ ನೆಟ್‍ವರ್ಕ್ ಸಮಸ್ಯೆಯಾಗದಂತೆ ಎಚ್ಚರ ವಹಿಸಿ ಎಂದು ಭಾರತ್ ಸಂಚಾರ ನಿಗಮ ಲಿಮಿಟೆಡ್‍ನ ಅಧಿಕಾರಿಗಳಿಗೆ ಸೂಚನೆ ನಿಡಿದರು.
ಟವರ್‍ಗಳಿಗೆ ಡೀಸೆಲ್ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ಜಿಲ್ಲಾಡಳಿತದ ವತಿಯಿಂದ ಡೀಸೆಲ್ ಒದಗಿಸಲಾಗುವುದು. ತಕ್ಷಣವೇ ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ಪ್ರವೃತ್ತರಾಗುವಂತೆ ಅವರು ತಿಳಿಸಿದರು.
ಪ್ರಕೃತಿ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ ಹೋಬಳಿ ವಲಯಕ್ಕೆ ನೇಮಕ ಮಾಡಲಾಗಿದೆ ಎಂದರು.