ಬ್ರಹ್ಮಗಿರಿ ಬೆಟ್ಟ ದುರಂತ : ಕಾರ್ಯಾಚರಣೆ ಚುರುಕುಗೊಳಿಸಲು ಸಚಿವ ಸೋಮಣ್ಣ ಸೂಚನೆ

08/08/2020

ಮಡಿಕೇರಿ ಆ.8 : ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಿರುವ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸಚಿವರು ಮಾತನಾಡಿದರು
ಪ್ರಕೃತಿ ವಿಕೋಪ ಸಂಬಂಧಿಸಿದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದರೂ ಸಹ, ಅವಘಡ ಸಂಭವಿಸಿದೆ. ಜನರ ನೋವು, ತೊಳಲಾಟ, ದುಗುಡ ನೋಡಲು ಸಾಧ್ಯವಾಗುತ್ತಿಲ್ಲ. ಬ್ರಹ್ಮಗಿರಿ ಬೆಟ್ಟದಲ್ಲಿ ಭೂ ಕುಸಿತದಿಂದ ಐವರು ಕಾಣೆಯಾಗಿದ್ದು, ಇದು ಸವಾಲಿನ ಕೆಲಸವಾಗಿದೆ. ಹಿಟಾಚಿಗಳನ್ನು ತರಿಸಿ ಶೀಘ್ರವೇ ಕಾರ್ಯ ನಿರ್ವಹಿಸಬೇಕು. ಈಗಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ. ಹಿಟಾಚಿಗಳು ತಲಕಾವೇರಿ ಪ್ರದೇಶವನ್ನು ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುಖ್ಯಮಂತ್ರಿ ಅವರು ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಿಹಾರ ಕಾರ್ಯವನ್ನು ಆರಂಭಿಸಲೇ ಬೇಕು ಎಂದರು.
ಪ್ರಕೃತಿ ವಿಕೋಪ ಸಂಬಂಧಿಸಿದಂತೆ ದಾನಿಗಳು ಬಟ್ಟೆ, ಬರೆ, ಇತರೆ ವಸ್ತುಗಳನ್ನು ನೀಡುವುದು ಬೇಡ, ಬದಲಾಗಿ ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಕಳುಹಿಸಬಹುದಾಗಿದೆ ಎಂದು ಸಚಿವರು ಮನವಿ ಮಾಡಿದರು.