ಕೊಡಗಿನಲ್ಲಿ ಮಹಾಮಳೆ : ಮಠ, ಮಂದಿರ, ಮಸೀದಿಗಳಿಗೂ ಜಲಾತಂಕ

08/08/2020

ಮಡಿಕೇರಿ ಆ.8 : ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬಹುತೇಕ ಗ್ರಾಮೀಣ ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಠ, ಮಂದಿರ, ಮಸೀದಿಗಳು ಕೂಡ ಪ್ರವಾಹದ ನೀರಿನ ಹೊಡೆತವನ್ನು ಎದುರಿಸುತ್ತಿವೆ.
ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಪಕ್ಕದ ಭಗಂಡೇಶ್ವರ ಕ್ಷೇತ್ರ ಭಾಗಮಂಡಲ ಜಲಾವೃತಗೊಂಡಿದೆ. ತಲಕಾವೇರಿಯಲ್ಲಿ ಇದೇ ಮೊದಲ ಬಾರಿಗೆ ಪೂಜೆ ಸ್ಥಗಿತಗೊಂಡಿದೆ. ಶ್ರೀಭಗಂಡೇಶ್ವರ ದೇವಾಲಯವನ್ನು ನೀರು ಆವರಿಸಿದೆ. ನದಿ ಪಾತ್ರದ ಬಲಮುರಿಯಲ್ಲಿ ಹಳೆಯ ಸೇತುವೆ ಮುಳುಗಡೆಯಾಗಿರುವುದಲ್ಲದೆ, ಅಲ್ಲಿನ ಕಣ್ಣ ಮುನೇಶ್ವರ ಮತ್ತು ಅಗಸ್ತ್ಯೇಶ್ವರ ದೇಗುಲಗಳು ಮುಳುಗಡೆಯಾಗಿದ್ದು, ಸಾವಿರಾರು ಎಕರೆ ಗದ್ದೆ ಹಾಗೂ ತೋಟ ಮುಳುಗಡೆಯಾಗಿದೆ.
ವಿರಾಜಪೇಟೆ ಅರಮೇರಿ ಕಳಂಚೇರಿ ಮಠ ಮತ್ತು ಮಠದ ವಸತಿ ಶಾಲೆಗಳು ಜಲಾವೃತಗೊಂಡಿವೆ. ನಾಪೋಕ್ಲು, ಕೊಂಡಂಗೇರಿ, ದಕ್ಷಿಣ ಕೊಡಗು ಭಾಗದ ಮಸೀದಿಗಳು ಕೂಡ ಪ್ರವಾಹದ ಆತಂಕದಲ್ಲಿ ಮುಳುಗಿದೆ.
::: ಆರೆಂಜ್ ಅಲರ್ಟ್ :::
ಆ.10 ರ ವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 1,539 ಮಿ.ಮೀ. ಮಳೆಯಾಗಿದೆ.