ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ 7 ಲಕ್ಷ ರೂ. ಪರಿಹಾರ : ಉಸ್ತುವಾರಿ ಸಚಿವ ಸೋಮಣ್ಣ

08/08/2020

ಮಡಿಕೇರಿ ಆ.8 : ಜಿಲ್ಲೆಯಲ್ಲಿ ಆಗಸ್ಟ್ 6 ರಂದು ತಲಕಾವೇರಿಯ ಬ್ರಹ್ಮಗಿರಿಬೆಟ್ಟದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಕಣ್ಮರೆಯಾಗಿದ್ದ 5 ಜನರ ಪೈಕಿ ಒಬ್ಬರ ಮೃತ ದೇಹ ಪತ್ತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಮಾಹಿತಿ ನೀಡಿದರು. ಮೃತರ ಕುಟುಂಬದ ಬಂಧುಗಳಿಗೆ ಸರ್ಕಾರ ವತಿಯಿಂದ 5 ಲಕ್ಷ, ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ಸೇರಿ 7 ಲಕ್ಷ ಪರಿಹಾರವನ್ನು ವಿತರಣೆ ಮಾಡಲಾಗುವುದು. ನಾಳೆ ಮಧ್ಯಾಹ್ನದೊಳಗೆ ಕಾರ್ಯಾಚರಣೆ ಅಂತ್ಯ ಕಾಣಬಹುದು ಎಂಬ ಭರವಸೆ ಇದೆ ಎಂದು ಸಚಿವರು ಹೇಳಿದರು.
ಜಿಲ್ಲೆಯಾದ್ಯಂತ 52 ಕಡೆ ಪ್ರವಾಹದಿಂದ ಸಮಸ್ಯೆಯಾಗಿದೆ. ಬ್ರಹ್ಮಗಿರಿ, ಕಡಗದಾಳು ಜೋಡುಪಾಲ ನೀರುಕೊಲ್ಲಿ, ಪೆರಾಜೆ ಸೇರಿ 16 ಕಡೆ ಭೂಕುಸಿತ ಆಗಿದೆ. ಎನ್ ಡಿ ಆರ್ ಎಫ್ ,ಎಸ್ ಡಿ ಆರ್ ಏಫ್ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದ್ದು ಜಿಲ್ಲೆಯ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ಸಚಿವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
ಕಣ್ಮರೆಯಾದ 5 ಜನರ ಪೈಕಿ ನಾರಾಯಣಾಚಾರ್ ಅವರ ಸಹೋದರ ಆನಂದ ತೀರ್ಥ ಸ್ವಾಮೀಜಿ (86) ಅವರ ಮೃತದೇಹ ಪತ್ತೆಯಾಗಿದೆ. ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ಮತ್ತು ಪೊಲೀಸ್ ಇಲಾಖೆಯ ತೀವ್ರ ಕಾರ್ಯಾಚರಣೆಯಿಂದ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿದರು.
ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗರದಲ್ಲಿರಿಸಲು ವ್ಯವಸ್ಥೆ ಮಾಡಲಾಗಿದೆ. ಶವ ಪರೀಕ್ಷೆಯ ನಂತರ ಶವ ಸಂಸ್ಕಾರ ಮಾಡಲು ಜಿಲ್ಲಾಡಳಿತ ಮತ್ತು ಸರ್ಕಾರದ ವತಿಯಿಂದ ಅಗತ್ಯ ವ್ಯವಸ್ಥೆ ನೀಡಲಾಗುವುದು. ನಾಳೆ ಮೃತರ ಕುಟುಂಬಸ್ಥರು ಬರುವವರಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 578 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ, ಕೆಲವರು ಕಾಳಜಿ ಕೇಂದ್ರದಲ್ಲಿದ್ದಾರೆ.ಮತ್ತೆ ಕೆಲವರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಾಳಜಿ ಕೇಂದ್ರದಲ್ಲಿ ಇರುವವರಿಗೆ ಕೋವಿಡ್-19 ಪರೀಕ್ಷೆ ನಡೆಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಆರೈಕೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ 649 ಜನ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದು ಸುರಕ್ಷಿತರಾಗಿದ್ದಾರೆ. ರಸ್ತೆ ಬಂದ್ ಆದ ಕಡೆ ಪರ್ಯಾಯ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲಾಡಳಿತದ ವತಿಯಿಂದ 24*7 ಸಹಾಯವಾಣಿ ಸಂಖ್ಯೆಯೂ ಇದ್ದೂ, 08272-221077 ಅನ್ನು 24 ಗಂಟೆಯೂ ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಜನರು ಕೆಲ ಪ್ರದೇಶದಲ್ಲಿ ಸುರಕ್ಷಿತ ಅಲ್ಲ ಎನ್ನುವ ಸ್ಥಳದಲ್ಲಿ ಇದ್ದರೆ. ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಹೋದರೆ ಅಗತ್ಯ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುತ್ತಾರೆ. ಇಲ್ಲಿಯವರೆಗೂ 247 ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಸಂಪೂರ್ಣವಾಗಿ ಮನೆ ಹಾನಿಯಾಗಿದ್ದರೆ ಸರ್ಕಾರದ ವತಿಯಿಂದ 5 ಲಕ್ಷ ರೂ ಪರಿಹಾರ ನೀಡಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಸುರಕ್ಷತೆ ಸಂಬಂಧ ಕ್ರಮ ವಹಿಸಲಾಗಿದೆ. ಅಪಾಯಕಾರಿ ಪ್ರದೇಶದ ಜನತೆಗೆ ಎಲ್ಲಿದ್ದರೆ ಸುರಕ್ಷಿತ ಎಂದೆನಿಸುತ್ತದೆಯೋ ಅಲ್ಲಿಗೆ ತೆರಳಲು ಉಸ್ತುವಾರಿ ಸಚಿವರು ಈ ಸಂದರ್ಭ ಮನವಿ ಮಾಡಿದರು.
ಭಾಗಮಂಡಲದಿಂದ ಬರುವಾಗ ಮುಖ್ಯಮಂತ್ರಿಯವರು ಕರೆಮಾಡಿ ಬೆಟ್ಟ ಕುಸಿತ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ.
ನಾಳೆ ಬೆಳಗ್ಗೆ 9-10 ಗಂಟೆಯೊಳಗೆ ರಕ್ಷಣಾ ಕಾರ್ಯ ಮತ್ತೆ ಮುಂದುವರೆಯಲಿದೆ ಎಂದು ಸಚಿವರು ತಿಳಿಸಿದರು.
ತಂತ್ರಿಗಳಿಂದ ಅವಶ್ಯ ಸಲಹೆ ಪಡೆದು ಭಾಗಮಂಡಲ ತಲಕಾವೇರಿ ದೇವಾಲಯದಲ್ಲಿ ಪೂಜಾ ಕೈಂಕರ್ಯ ಆರಂಭ ಮಾಡಲಿದ್ದೇವೆ ಎಂದು
ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಅವರು ಮಾಹಿತಿ ನೀಡಿದರು.
ಸಂಸದರಾದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಇತರರು ಇದ್ದರು.