ಮಹಾಮಳೆಯಿಂದ ಅಪಾರ ಹಾನಿ : ಸೂಕ್ತ ಪರಿಹಾರಕ್ಕೆ ಕಾಫಿ ಬೆಳೆಗಾರರ ಒತ್ತಾಯ

09/08/2020

ಮಡಿಕೇರಿ ಆ.9 : ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಳೆದ 8 ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಭಾರೀ ನಷ್ಟ ಸಂಭವಿಸಿದ್ದು, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.
ಒಂದು ವಾರ ಸುರಿದ ಕುಂಭದ್ರೋಣ ಮಳೆ ದೊಡ್ಡ ಆವಾಂತರವನ್ನೇ ಸೃಷ್ಟಿಸಿದೆ. ಭಾರೀ ಗಾಳಿ-ಮಳೆಯಿಂದ ಎಕರೆಗೆ ಕನಿಷ್ಟ 20 ರಷ್ಟು ಭಾರೀ ಗಾತ್ರದ ಮರಗಳು ಬಿದ್ದು ಸುಮಾರು 100 ಕ್ಕಿಂತಲೂ ಹೆಚ್ಚಿನ ಕಾಫಿ ಗಿಡಗಳು ನಾಶವಾಗಿದ್ದು, ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ.
ಕಾಫಿಯ ಜೊತೆಗೆ ಕಾಳುಮೆಣಸು, ಅಡಿಕೆ, ಮುಂತಾದ ಬೆಳೆಗಳೂ ಸಹಾ ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಕಾಫಿಯು ಹೆಚ್ಚಿನ ಪ್ರಮಾಣದಲ್ಲಿ ಉದುರಲು ಪ್ರಾರಂಭಿಸಿದ್ದು, ಗಿಡದ ರೆಕ್ಕೆಗಳು ಮತ್ತು ಚಿಗುರು ಸಹಾ ಗಾಳಿಯ ರಭಸಕ್ಕೆ ಮುರಿದು ಬಿದ್ದಿದೆ. ಮುಂದಿನ ಫಸಲಿನ ಮೇಲೆ ಇದು ತೀವ್ರ ದುಷ್ಪರಿಣಾಮ ಬೀರಿದೆ.
ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕಳೆದ 5-6 ದಿನಗಳಿಂದ ಹಲವಾರು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಈಗಾಗಲೇ ಕರ್ನಾಟಕ ಬೆಳೆಗಾರರ ಒಕ್ಕೂಟವು ಸಕಲೇಶಪುರದ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿದೆ. ಅದೇ ರೀತಿಯಾಗಿ ಕೊಡಗು, ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸಹಾ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಕಾರ್ಯದರ್ಶಿ ಮುರಳೀಧರ್ ಬಕ್ಕರವಳ್ಳಿ ತಿಳಿಸಿದ್ದಾರೆ.
ಸರ್ಕಾರ ಮತ್ತು ಕಾಫಿ ಮಂಡಳಿ ಕೂಡಲೇ ಕಾರ್ಯಪ್ರವೃತ್ತಗೊಂಡು ಅತಿಯಾದ ಗಾಳಿ-ಮಳೆಯಿಂದ ನಷ್ಟ ಹೊಂದಿರುವ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಾಫಿ ಬೆಳೆಗಾರರು ತಾವು ತಮ್ಮ ತೋಟಗಳಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ಫೋಟೋ ಸಮೇತ ವರದಿಯನ್ನು ಸಂಬಂಧಪಟ್ಟ ದಾಖಲೆಯೊಂದಿಗೆ (ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ,)ಸಂಬಂಧಿಸಿದ ತಹಶೀಲ್ದಾರರಿಗೆ ಸಲ್ಲಿಸುವಂತೆಯೂ ತೀರ್ಥಮಲ್ಲೇಶ್ ಕೋರಿದ್ದಾರೆ.