ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಲಕಾವೇರಿಗೆ ಭೇಟಿ

August 9, 2020

ಮಡಿಕೇರಿ ಆ.9 : ರಾಜ್ಯದಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪವನ್ನು ನಿಭಾಯಿಸುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಕಳೆದ ವರ್ಷದ ಮಳೆಹಾನಿ ಪರಿಹಾರವನ್ನೇ ತುಂಬಲು ಇಲ್ಲಿಯವರೆಗೆ ಸರ್ಕಾರಕ್ಕೆ ಸಾಧ್ಯವಾಗಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಬ್ರಹ್ಮಗಿರಿ ಬೆಟ್ಟ ಕುಸಿದು ಐವರು ನಾಪತ್ತೆಯಾದ ತಲಕಾವೇರಿ ಪ್ರದೇಶಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಾಕೃತಿಕ ವಿಕೋಪದಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ನಾವು ಮಾಡಿ ತೋರಿಸುತ್ತೇವೆ, ಕಾಂಗ್ರೆಸ್‍ಗೆ ಅಧಿಕಾರ ಬಿಟ್ಟು ಕೊಡಲಿ ಎಂದು ಶಿವಕುಮಾರ್ ಬಿಜೆಪಿಗೆ ಸವಾಲು ಹಾಕಿದರು.
ಕಳೆದ ಸಾಲಿನ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡು ಸಂತ್ರಸ್ತರಾದ ಮಂದಿಗೆ ಇಲ್ಲಿಯವರೆಗೂ ಸೂಕ್ತ ಪರಿಹಾರವನ್ನು ಸರ್ಕಾರ ನೀಡಿಲ್ಲ. ಮನೆ ಕಳೆದುಕೊಂಡವರಿಗೆ ಕನಿಷ್ಟ ಬಾಡಿಗೆ ಹಣವನ್ನು ಕೂಡ ನೀಡಲು ಸಾಧ್ಯವಾಗಿಲ್ಲವೆಂದು ಟೀಕಿಸಿದರು.