ಪ್ರಗತಿಪರ ಸಂಘಟನೆಗಳ ವೇದಿಕೆಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ

10/08/2020

ಮಡಿಕೇರಿ ಆ.10 : ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಪ್ರಗತಿಪರ ಸಂಘಟನೆಗಳ ವೇದಿಕೆ ಮತ್ತು ಸಮಾನ ಮನಸ್ಕರ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು.
“ನಾವು ಭಾರತೀಯರು ಎಂಬ ಪ್ರತಿಜ್ಞೆಯೊಂದಿಗೆ ‘ಭಾರತ ಉಳಿಸಿ” ಪ್ರತಿಭಟನಾ ಅಭಿಯಾನದ ಅಂಗವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇದಿಕೆಯ ಪ್ರಮುಖರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರಗತಿಪರ ವೇದಿಕೆಯ ಜಿಲ್ಲಾಧ್ಯಕ್ಷ ಅಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, 1942ರಲ್ಲಿ ಅಂದಿನ ದೇಶ ಪ್ರೇಮಿ ನಾಯಕರು ಕ್ವಿಟ್ ಇಂಡಿಯಾ ಚಳುವಳಿ ಮೂಲಕ ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎಂದು ಚಳುವಳಿ ನಡೆಸಿ ಯಶಸ್ವಿಯಾಗಿದ್ದರು. ಆದರೆ, ಇಂದಿನ ಪ್ರಧಾನಿ ನರೇಂದ್ರಮೋದಿಯವರು ಎಲ್ಲಾ ವಿದೇಶಗಳನ್ನು ಸುತ್ತಿ ಭಾರತದಲ್ಲಿ ಬಂಡವಾಳ ಹೂಡುವಂತೆ ಆಹ್ವಾನಿಸುತ್ತಿರುವುದು ಖಂಡನೀಯ ಎಂದರು.
ನಮ್ಮ ದೇಶದ ನೆಲ, ಜಲ ಸೇರಿದಂತೆ ಸರ್ವ ಸಂಪತ್ತನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು, ಈ ನೀತಿಯನ್ನು ವಿರೋಧಿಸಿ ಸಮಾನ ಮನಸ್ಕರ ಸಹಿ ಸಂಗ್ರಹ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು ಎಂದರು.
ವೇದಿಕೆಯ ಸದಸ್ಯ ಹಾಗೂ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ದೇಶದ ಸಂಪತ್ತು ಪರಕೀಯರ ಪಾಲಾಗುವುದನ್ನು ಸಹಿಸಲು ಸಾಧ್ಯವಿಲ್ಲವೆಂದರು.
ಕೋವಿಡ್ ನಿಂದಾಗಿ ದೇಶದಲ್ಲಿ ಸಾವು, ನೋವುಗಳು ಸಂಭವಿಸುತ್ತಿದ್ದರೂ ಇದನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಭೂ ತಿದ್ದುಪಡಿ ಕಾಯ್ದೆ ಸೇರಿದಂತೆ ತಮಗೆ ಇಷ್ಟ ಬಂದ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕೃಷಿಕರ, ಕಾರ್ಮಿಕರ ಮತ್ತು ಕಡುಬಡವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಅತಿವೃಷ್ಟಿ ಹಾನಿಯಿಂದ ನಲುಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

::: ಬೇಡಿಕೆಗಳು :::
ಕಾರ್ಪೋರೇಟ್ ಕಂಪನಿಗಳನ್ನು ತೊಲಗಿಸಿ ಭಾರತವನ್ನು ಉಳಿಸಬೇಕು, ರೈತರಿಗೆ ಮಾರಕವಾಗಿರುವ ಕಾರ್ಪೋರೇಟ್ ಕೃಷಿ ನೀತಿಯನ್ನು ಕೈಬಿಡಬೇಕು, ಕರ್ನಾಟಕ ಭೂ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು, ಕೃಷಿ ಫಾರ್ಮಿಂಗ್ ಗುತ್ತಿಗೆ ಪದ್ಧತಿಯನ್ನು ಹಿಂಪಡೆಯಬೇಕು, ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲದ ಬೆಲೆಯನ್ನು ಇಳಿಸಬೇಕು, ರಾಜ್ಯದಲ್ಲಿ ದಲಿತ, ಆದಿವಾಸಿ, ಅಲ್ಪಸಂಖ್ಯಾತರ ಕಡುಬಡವರ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸಬೇಕು, ಕೃಷಿ ತಜ್ಞ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು, ಕೊರೋನಾ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿ ಎಲ್ಲಾ ಕುಟುಂಬಗಳಿಗೂ ಆಹಾರ, ಔಷಧಿ ನೀಡಬೇಕು, ಪ್ರಾಕೃತಿಕ ವಿಕೋಪದಿಂದ ನಷ್ಟ ಉಂಟಾದ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ನೀಡುವುದರೊಂದಿಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ಹೆಚ್.ಇ.ಸಣ್ಣಪ್ಪ, ವೇದಿಕೆಯ ಸದಸ್ಯ ಮೊಣ್ಣಪ್ಪ, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್.ಅಬೂಬಕ್ಕರ್, ನಗರಾಧ್ಯಕ್ಷ ಮನ್ಸೂರ್, ಪಿಎಫ್‍ಐ ನಗರಾಧ್ಯಕ್ಷ ಮುಸ್ತಫ, ಕಾರ್ಯದರ್ಶಿ ಹ್ಯಾರಿಸ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.