ತೆಪ್ಪದಕಂಡಿ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿದ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್

ಮಡಿಕೇರಿ ಆ. 10 : ಕಳೆದ ಮೂರು ವರ್ಷಗಳಿಂದ ತೆಪ್ಪದಕಂಡಿ ಗ್ರಾಮದ ಕಾವೇರಿ ನದಿದಡ ನಿವಾಸಿಗಳ ಮನೆಗಳು ಜಲಾವೃತಗೊಂಡಿದ್ದು, ಸ್ಥಳಕ್ಕೆ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದೆಂದರು.
ಈ ಸಂದರ್ಭ ಗ್ರಾಮದ ನಿವಾಸಿ ಮೊಣ್ಣಪ್ಪ ಮಾತನಾಡಿ, ಕಳೆದ ಮೂರು ವರ್ಷಗಳಿಂದ ತೆಪ್ಪದಕಂಡಿ ಗ್ರಾಮದ ಕಾವೇರಿ ನದಿದಡ ನಿವಾಸಿಗಳ ಮನೆಗಳು ನೀರಿನಿಂದ ಜಲಾವೃತಗೊಂಡು ಸಂಕಷ್ಟದಲ್ಲಿ ಸಿಲುಕಿಕೊಳ್ಳುವುದು ಸರ್ವೇಸಾಮಾನ್ಯವಾಗಿದ್ದು, ಆತಂಕದಲ್ಲಿ ದಿನ ದೂಡುವಂತಾಗಿದೆ ಎಂದು ಬೇಸಾರ ವ್ಯಕ್ತಪಡಿಸಿದರು.
ಇಲ್ಲಿಯ ವರೆಗೊ ತೆಪ್ಪದಕಂಡಿ ನಿವಾಸಿಗಳಿಗೆ ಯಾವುದೇ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ದೊರತ್ತಿಲ್ಲ. ಮಳೆಗಾಲ ಪ್ರಾರಂಭದ ಹಂತದಲ್ಲಿ ಸ್ಥಳೀಯ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿಡಿಓ ಮನೆಯ ಬಳಿ ಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಹೇಳುವುದು ಬಿಟ್ಟರೆ ಇಲ್ಲಿಯವರೆಗೆ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಆರೋಪಿಸಿದರು.
ಕೊಡಗು ಜನಪತ್ರಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ಭಾಗದಲ್ಲಿ ಕಾಣಿಸಿಕೊಳ್ಳುವುದು ಬಿಟ್ಟರೆ ಮತ್ತೆಯಾವತ್ತು ಇಲ್ಲಿನ ಗ್ರಾಮಸ್ಥರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಕೊಡಗು ಜೆಡಿಎಸ್ ಜಿಲ್ಲಾ ಖಜಾಂಚಿ ಡೆನ್ನಿ ಬಿರೋಸ್, ಕೊಡಗು ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಸುನಿಲ್, ಅಲ್ಪ ಸಂಖ್ಯಾತರ ಘಟಕದ ಜಿಲಾಧ್ಯಕ್ಷ ಇಸಾಕ್ ಖಾನ್ ಇದ್ದರು.


