ಪ್ರವಾಹ ಪೀಡಿತ ಪ್ರದೇಶಗಳಿಗೆ ಐಎನ್‍ಟಿಯುಸಿ ರಾಜ್ಯಉಪಾಧ್ಯಕ್ಷ ನಾಪಂಡ ಮುತ್ತಪ್ಪ ಭೇಟಿ

10/08/2020

ಮಡಿಕೇರಿ ಆ. 10 : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿ ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತರು ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ಐಎನ್‍ಟಿಯುಸಿ ರಾಜ್ಯಉಪಾಧ್ಯಕ್ಷ ನಾಪಂಡ ಮುತ್ತಪ್ಪ ಭೇಟಿ ನೀಡಿದರು.
ನೆಲ್ಲಿಹುದಿಕೇರಿ ಕಾವೇರಿ ನದಿ ದಡ ಪ್ರದೇಶಗಳಾದ ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ ಪ್ರವಾಹ ಪೀಡಿತ ಸ್ಥಳಕ್ಕೆ ಬೋಟ್ ಮೂಲಕ ತೆರಳಿ ಪ್ರವಾಹದಿಂದ ಮನೆಗಳು ನೀರಿನಲ್ಲಿ ಮುಳುಗಿರುವುದನ್ನು ಪರಿಶೀಲನೆ ನಡೆಸಿದರು.
ನಂತರ ಖಾಸಗಿ ಕಟ್ಟಡವೊಂದರಲ್ಲಿರುವ ಸಂತ್ರಸ್ತರ ಪರಿಹಾರಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದಲೂ ನದಿ ದಡದಲ್ಲಿ ಸಂಕಷ್ಟದ ಜೀವನ ನಡೆಸುತ್ತಿರುವ ಸಂತ್ರಸ್ತರಿಗೆ ಪುನರ್ವಸತಿಕಲ್ಪಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸಬೇಕು ಎಂದು ಒತ್ತಾಯಿಸಿದರು.
ನಂತರ ಕರಡಿಗೋಡು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಎರಡು ಪರಿಹಾರ ಕೇಂದ್ರದಲ್ಲಿದ್ದ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭ ನೆಲ್ಯಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು ವರ್ಗಿಸ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಕೆ.ಎಂ ಸಯ್ಯದ್ ಭಾವ ಸೇರಿದಂತೆ ಮತ್ತಿತರರು ಇದ್ದರು.