ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಜಿಲ್ಲೆಯಲ್ಲಿಯೇ ಇರುತ್ತೇನೆ : ಸಚಿವ ವಿ.ಸೋಮಣ್ಣ ಹೇಳಿಕೆ

10/08/2020

ಮಡಿಕೇರಿ ಆ.10 : ಪ್ರಕೃತಿ ವಿಕೋಪ ಸಂಬಂಧಿಸಿದಂತೆ ತಲಕಾವೇರಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ, ಪರಿಹಾರ ಕೇಂದ್ರಗಳ ನಿರ್ವಹಣೆ ಮತ್ತಿತರ ಸಂಬಂಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಶಾಸಕರು, ಸಂಸದರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಈಗಾಗಲೇ ಹಿಟಾಚಿ ಆಗಮಿಸಿರುವ ಹಿನ್ನೆಲೆ ಕಾರ್ಯಾಚರಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಕಾರ್ಯಾಚರಣೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಕಾಲ ಕಾಲಕ್ಕೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಈಗಾಗಲೇ ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸರಿಯಾದ ಸಮಯಕ್ಕೆ ಊಟೋಪಚಾರ, ಕುಡಿಯುವ ನೀರು ಒದಗಿಸುವಂತೆ ಸೂಚನೆ ನೀಡಿದರು.
ತಹಶೀಲ್ದಾರರು ಕಾರ್ಯಾಚರಣೆ ಸ್ಥಳದಲ್ಲಿಯೇ ಮೊಕ್ಕಾಂ ಹೂಡಬೇಕು. ಕಾಲ ಕಾಲಕ್ಕೆ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದರು. ಕಾರ್ಯಾಚರಣೆ ಮುಗಿಯುವವರೆಗೆ ನಾನು ಜಿಲ್ಲೆಯಲ್ಲಿಯೇ ಇರುತ್ತೇನೆ ಎಂದು ವಿ.ಸೋಮಣ್ಣ ಅವರು ಹೇಳಿದರು.
ಈಗಾಗಲೇ ನಿಯೋಜಿಸಿರುವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಅವರು ಕಟ್ಟುನಿಟ್ಟಿನಿಟ್ಟಿನ ಸೂಚನೆ ನೀಡಿದರು.
ಕಾರ್ಯಾಚರಣೆ ಸಂದರ್ಭದಲ್ಲಿ ಲೋಕೋಪಯೋಗಿ ಮತ್ತು ಕಾರ್ಯಪಾಲಕ ಎಂಜಿನಿಯರ್ ಅವರು ಸ್ಥಳದಲ್ಲಿಯೇ ಇರಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಂಬ್ಯುಲೆನ್ಸ್ ಒದಗಿಸಬೇಕು ಎಂದು ಸಚಿವರು ತಿಳಿಸಿದರು.

ಪರಿಹಾರ ಕೇಂದ್ರದಲ್ಲಿ ಯಾವುದೇ ದೂರುಗಳು ಬರದಂತೆ ಅಧಿಕಾರಿಗಳು ಗಮನಹರಿಸಬೇಕು. ಜಿಲ್ಲೆಯ ಯಾವ ಯಾವ ಭಾಗದಲ್ಲಿ ಮನೆಗೆ ನೀರು ನುಗ್ಗಿದೆ ಅಂತಹ ಮನೆಗಳ ಮಾಹಿತಿ ತಕ್ಷಣ ಒದಗಿಸುವಂತೆ ವಿ.ಸೋಮಣ್ಣ ಅವರು ಸೂಚಿಸಿದರು.
ಕಾರ್ಯಾಚರಣೆ ಬಗ್ಗೆ ಡಿವೈಎಸ್‍ಪಿ ಅವರು ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಕಾರ್ಯಾಚರಣೆ ಸ್ಥಳದಲ್ಲಿ ತಾತ್ಕಾಲಿಕ ಟೆಂಟ್ ಸಿದ್ದಪಡಿಸುವಂತೆ ಸಚಿವರು ಸಲಹೆ ಮಾಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕಾರ್ಯಾಚರಣೆಯನ್ನು ನಮಗೆ ತಿಳಿಸದೆ ಸ್ಥಗಿತಗೊಳಿಸಬಾರದು. ಕಾರ್ಯಾಚರಣೆ ಚುರುಕುಗೊಳಿಸಬೇಕು. ಪರಿಸ್ಥಿತಿಯನ್ನು ಅರ್ಥಮಾಡಿ ಕೊಂಡು ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅಧಿಕಾರಿಗಳು ತಮಗೆ ವಹಿಸಲಾಗಿರುವ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಅರಣ್ಯ ಇಲಾಖೆಯ 25 ಸಿಬ್ಬಂದಿಗಳು, ಅಗ್ನಿ ಶಾಮಕ ಇಲಾಖೆಯಿಂದ 8 ಮಂದಿ, ಎನ್‍ಡಿಆರ್‍ಎಫ್‍ನಿಂದ 23 ಮಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ತಲಕಾವೇರಿ ಬಳಿ ಇರುವ ಅರಣ್ಯ ಇಲಾಖೆ ಪ್ರವಾಸಿ ಮಂದಿರವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ತಿಳಿಸಿದರು.
ಸಂಸದರಾದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ತಾ.ಪಂ.ಇಒ ಲಕ್ಷ್ಮೀ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮದನ್ ಮೋಹನ್, ಡಿವೈಎಸ್‍ಪಿ ದಿನೇಶ್ ಕುಮಾರ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಚಂದನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ತಹಶೀಲ್ದಾರ್ ಮಹೇಶ್, ಭಾಗಮಂಡಲ ಪಿಡಿಒ ಅಶೋಕ್ ಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಇತರರು ಇದ್ದರು.