ಕಾರ್ಯಾಚರಣೆ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ವಿ.ಸೋಮಣ್ಣ

10/08/2020

ಮಡಿಕೇರಿ ಆ.10 : ವಸತಿ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಭಾಗಮಂಡಲದ ತಲಕಾವೇರಿ ಬಳಿಯಲ್ಲಿ ಉಂಟಾದ ಬೆಟ್ಟ ಕುಸಿತದ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಶೋಧ ಕಾರ್ಯಾಚರಣೆಯನ್ನು ಪರಿಶೀಲಿಸಿದರು.
ಖುದ್ದು ಸಚಿವರೇ ಶೋಧ ಕಾರ್ಯದ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಸಂಬಂಧಿಸಿದಂತೆ ಎನ್‍ಡಿಆರ್‍ಎಫ್ ಮತ್ತು ಅರಣ್ಯ ಇಲಾಖೆಯ ತಂಡಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಶೀಘ್ರವೇ ಶೋಧ ಕಾರ್ಯಾಚರಣೆ ಮುಕ್ತಾಯವಾಗುವ ಭರವಸೆ ನನಗಿದೆ. ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವವರ ಶೋಧ ಕಾರ್ಯಕ್ಕಾಗಿ ಎಲ್ಲಾ ರೀತಿಯ ಕ್ರಮ ಕೈಗೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಸರ್ಕಾರ ನನಗೆ ವಹಿಸಿರುವ ಕೆಲಸವನ್ನು ನಿರ್ವಹಿಸುತ್ತಿದ್ದೇನೆ. ಇಂತಹ ಘಟನೆ ಸಂಭವಿಸಬಾರದಿತ್ತು. ವಯಸ್ಸಿನ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳದೇ ನಾರಾಯಣಾಚರ್ ಮತ್ತು ಉಳಿದ 3 ಜನರ ಪತ್ತೆಗಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಈಗಾಗಲೇ ಹಿಟಾಚಿ ಕೂಡ ಘಟನಾ ಸ್ಥಳಕ್ಕೆ ಬಂದಿದೆ. ಈ ಮೂಲಕ ಸದ್ಯದಲ್ಲಿ ಶೋಧಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಗಳಿದೆ ಎಂದು ಅವರು ಹೇಳಿದರು.
ಬಳಿಕ ತಲಕಾವೇರಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಬೆಟ್ಟ ಕುಸಿತ ಆರಂಭಗೊಂಡ ಪ್ರದೇಶದ ಪರಿವೀಕ್ಷಣೆಯನ್ನು ನಡೆಸಿದರು. ಸಾಧ್ಯವಾದಷ್ಟು ಶೀಘ್ರವಾಗಿ ತಲಕಾವೇರಿ ದೇವಾಲಯಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ, ಸಂಸದರಾದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಡಿವೈಎಸ್‍ಪಿ ದಿನೇಶ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದನ್, ತಹಶೀಲ್ದಾರ್ ಮಹೇಶ್ ಇತರರು ಇದ್ದರು.