ತಲಕಾವೇರಿಯಲ್ಲಿ ಪೂಜಾ ಕೈಂಕರ್ಯ ಪುನರ್ ಆರಂಭಿಸಲು ನಿರ್ಧಾರ

August 10, 2020

ಮಡಿಕೇರಿ ಆ.10 : ಇತ್ತೀಚೆಗೆ ತಲಕಾವೇರಿ ಕ್ಷೇತ್ರದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಶ್ರೀ ತಲಕಾವೇರಿ ದೇವಾಲಯದಲ್ಲಿ ದೈನಂದಿನ ಪೂಜಾ ಕೈಕಂಕರ್ಯಗಳಿಗೆ ಅಡಚಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಪುನರ್ ಆರಂಭಿಸುವ ಬಗ್ಗೆ ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.
ಭಾಗಮಂಡಲದ ಹೋಟೆಲ್ ಮಯೂರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಲಕಾವೇರಿ ದೇವಾಲಯದ ರಸ್ತೆ ಸಂಚಾರಕ್ಕೆ ಯೋಗ್ಯವಾದ ನಂತರ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಕೈಗೊಂಡು ದೈನಂದಿನ ಪೂಜಾ ಕಾರ್ಯ ಹಾಗೂ ವಿಧಿ ವಿಧಾನಗಳನ್ನು ಕೈಗೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ತಲಕಾವೇರಿ ಕ್ಷೇತ್ರವು ಕೊಡಗಿನ ಪುಣ್ಯಕ್ಷೇತ್ರವಾಗಿದ್ದು, ಕ್ಷೇತ್ರದ ಭಕ್ತಾಧಿಗಳ ಭಾವನೆಗೆ ಧಕ್ಕೆಯಾಗದಂತೆ ತಂತ್ರಿಯವರ ಸಲಹೆ ಮಾರ್ಗದರ್ಶನ ಪಡೆಯಲು ಹಲವರು ಸಲಹೆ ನೀಡಿದರು.
ಸಭೆಯ ಆರಂಭದಲ್ಲಿ ಭಾಗಮಂಡಲ ಭಗಂಡೇಶ್ವರ-ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಅವರು ಮಾತನಾಡಿ ತಲಕಾವೇರಿ ದೇವಾಲಯ ಬಳಿ ಭೂಕುಸಿತ ಉಂಟಾಗಿ ಅವಘಡ ಸಂಭವಿಸಿದೆ. ಇದು ಆಗಬಾರದಿತ್ತು, ಆಗಿ ಹೋಗಿದೆ. ತಂತ್ರಿಗಳ ಸಲಹೆಯಂತೆ ಪೂಜಾ ಕಾರ್ಯ ಆರಂಭಿಸಬೇಕಿದೆ ಎಂದು ಅವರು ಹೇಳಿದರು.
ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ದೇವಾಲಯದಲ್ಲಿ ಇದುವರೆಗೆ ಪೂಜಾ ಕಾರ್ಯಗಳು ನಿಂತಿರಲಿಲ್ಲ. ಭೂಕುಸಿತದಿಂದಾಗಿ ತಲಕಾವೇರಿ ದೇವಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ವಾರದಿಂದ ಪೂಜೆ ಕಾರ್ಯ ನಿಂತು ಹೋಗಿದೆ. ರುದ್ರಾಭಿಷೇಕ, ಗಣಪತಿ ಹೋಮ ಮತ್ತಿತರ ಪೂಜಾ ಕಾರ್ಯ ಕೈಗೊಂಡು ತಂತ್ರಿಗಳ ಮಾರ್ಗದರ್ಶನ ಹಾಗೂ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಪೂಜಾ ಕಾರ್ಯವನ್ನು ಪುನರ್ ಆರಂಭಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ಮತ್ತೊಬ್ಬ ಸಮಿತಿ ಸದಸ್ಯರಾದ ಸಣ್ಣುವಂಡ ಡಾ.ಕಾವೇರಪ್ಪ ಅವರು ಮಾತನಾಡಿ ತಲಕಾವೇರಿಯಲ್ಲಿ ಭಗ್ನಗೊಂಡ ಅಗಸ್ತ್ಯೇಶ್ವರ ವಿಗ್ರಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಆ ವಿಗ್ರಹ ವಿಸರ್ಜನೆಯಾಗದೆ ದೇವಸ್ಥಾನದಲ್ಲಿಯೇ ಉಳಿದಿದೆ. ಅದನ್ನು ಸಂಬಂಧಪಟ್ಟವರ ಜೊತೆ ಚರ್ಚಿಸಿ ವಿಸರ್ಜಿಸುವ ಕಾರ್ಯ ಆಗಬೇಕು ಎಂದರು. ಅಲ್ಲದೆ ಭಾಗಮಂಡಲ ಪಟ್ಟಣದ ಒಳಚರಂಡಿ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಈ ಕಾರ್ಯ ಭಾಗಮಂಡಲದ ಮೇಲ್ಸೇತುವೆ ಕಾಮಗಾರಿಗೂ ಮೊದಲೇ ಪೂರ್ಣಗೊಳಿಸಬೇಕು ಎಂದು ಅವರು ಕೋರಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಅರ್ಚಕ ರಾಜೇಶ್ ಆಚಾರ್ ಅವರು ತಲಕಾವೇರಿಯಲ್ಲಿ ರುದ್ರಾಭಿಷೇಕ, ನೈವೇದ್ಯ ಪೂಜಾ ಕಾರ್ಯ ಮಾಡಬೇಕಿದೆ. ನಿತ್ಯ ಪೂಜೆ ಜೊತೆಗೆ ಎಷ್ಟು ದಿನ ಪೂಜೆ ನಡೆದಿಲ್ಲ, ಅದೂ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ಏರ್ಪಡಿಸಬೇಕಿದೆ ಎಂದರು.
ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ತಲಕಾವೇರಿ ದೇವಾಲಯದಲ್ಲಿ ಯಾವುದೇ ಕಾರಣಕ್ಕೂ ಪೂಜಾ ಕಾರ್ಯ ನಿಲ್ಲಿಸಬಾರದು. ಇತರರ ಮಾತುಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು. ಮೃತ ದೇಹ ಸಿಗುವವರೆಗೆ ತಲಕಾವೇರಿ ದೇವಾಲಯಕ್ಕೆ ತೆರಳಲು ದಾರಿ ಮಾಡುವುದು ಕಷ್ಟಸಾಧ್ಯವಾಗಿದೆ ಎಂದರು.