ವಿರಾಜಪೇಟೆ ತಾಲ್ಲೂಕು ಕರಡು ಮತದಾರರ ಪಟ್ಟಿ ಪ್ರಕಟ

10/08/2020

ಮಡಿಕೇರಿ ಆ.10 : ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಒಟ್ಟು 38 ಗ್ರಾಮ ಪಂಚಾಯಿತಿಗಳ ಪೈಕಿ 35 ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ ಕ್ರಮವಾಗಿ ಜೂನ್-2020 ಮತ್ತು ಜುಲೈ-2020 ಮಾಹೆಯಲ್ಲಿ ಮುಕ್ತಾಯವಾಗಿದ್ದು, ಈ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಹಾಲಿ ಇರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಗ್ರಾಮ ಪಂಚಾಯಿತಿಗಳ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ತಯಾರಿಸಿ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್, 7 ರಂದು ತಹಶೀಲ್ದಾರರ, ಗ್ರಾಮ ಪಂಚಾಯಿತಿ, ಕಂದಾಯ ಪರಿವೀಕ್ಷಕರ ಮತ್ತು ಗ್ರಾಮ ಲೆಕ್ಕಿಗರ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಸಾರ್ವಜನಿಕರು ಈ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಯಾವುದೇ ಲೋಪದೂಷಗಳಿದ್ದಲ್ಲಿ, ಮತದಾರರ ಹೆಸರು ತಾವು ವಾಸವಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಇರದೆ ಬೇರೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮತ್ತು ನಗರ ಪ್ರದೇಶದ ಮತದಾರರ ಹೆಸರನ್ನು ಅಥವಾ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಆಕ್ಷೇಪಣೆಗಳನ್ನು ಆಗಸ್ಟ್ 14 ರೊಳಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಸಲ್ಲಿಸುವಂತೆ ವಿರಾಜಪೇಟೆ ತಾಲ್ಲೂಕು ತಹಶೀಲ್ದಾರರಾದ ನಂದೀಶ್ ಅವರು ಕೋರಿದ್ದಾರೆ.