ಮಡಿಕೇರಿಯಲ್ಲಿ ಕೊಡಗು ಕಾಂಗ್ರೆಸ್‍ನಿಂದ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ

11/08/2020

ಮಡಿಕೇರಿ ಆ. 10 : ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ
ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಡಿಸಿಸಿ ಸದಸ್ಯರಾದ ಪುಷ್ಪ ಪೂಣಚ್ಚ ಅವರ ಪ್ರಯೋಜಕತ್ವದಲ್ಲಿ ಒಂದು ಸಾವಿರ ಮಾಸ್ಕ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮಾಸ್ಕ್‍ಗಳನ್ನು ಕಾಂಗ್ರೆಸ್ ವತಿಯಿಂದ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮೂಲಕ ಕೋವಿಡ್‍ನಿಂದ ದೂರ ಉಳಿಯಲು ಮುಂದಾಗಬೇಕು ಎಂದರು.
ರಾಜೀವ್ ಗಾಂಧಿ ಪಂಚಾಯ್ತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನಾ ಮಾತನಾಡಿ, ಕೊವೀಡ್ ಸಾಂಕ್ರಾಮಿಕ ರೋಗ ದೇಶ ವ್ಯಾಪಿ ಹರಡುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರಿಗೆ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಕೊರೋನಾ ಸೋಂಕು ಸಂಬಂಧಿಸಿದ ಪರಿಕರಗಳು ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದಿದ್ದು, ಪ್ರತಿ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಿಗೆ ಕೊವೀಡ್ ತಪಾಸಣೆ ನಡೆಸಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿ ಗ್ರಾ. ಪಂ. ಮಟ್ಟದ ಇಬ್ಬರು ಕೊರೋನಾ ವಾರಿಯರ್ಸ್‍ಗೆ 2 ಲಕ್ಷ ರೂ. ಆರೋಗ್ಯ ವಿಮೆ ಮಾಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾಮುದ್ದಪ್ಪ, ಕಾಂಗ್ರೆಸ್ ಕಾರ್ಯಕರ್ತರಾದ ಸೈಮಾನ್, ಕೋಚನಾ ಮೋಹನ್, ಎಂ.ಎಂ. ಹನೀಪ್, ಸೆಬಾಸ್ಟಿಯನ್ ಹಾಜರಿದ್ದರು.