ಕಾಂಗ್ರೆಸ್ ನಿಂದ ಜನಧ್ವನಿ ಹೋರಾಟ

11/08/2020

ಬೆಂಗಳೂರು ಆ.11 : ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನವನ್ನು ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟದ ದಿನವನ್ನಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ.
ದೇವರಾಜ ಅರಸು ಜಾರಿಗೆ ತಂದಿದ್ದ ಕ್ರಾಂತಿಕಾರಕ ಉಳುವವನೇ ಭೂಮಿಯ ಹೊಲದೊಡೆಯ ಕಾನೂನಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಉಳ್ಳವನೇ ಭೂಮಿಯ ಒಡೆಯ ಎಂಬ ಕಾನೂನು ವಿರುದ್ಧದ ಹೋರಾಟಕ್ಕೆ ಈ ದಿನವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಜತೆಗೆ ಎಪಿಎಂಸಿ ಕಾಯಿದೆ ತಿದ್ದುಪಡಿ, ಕೊರೋನಾ ಭ್ರಷ್ಟಾಚಾರ ಸೇರಿದಂತೆ ಜನ ವಿರೋಧಿ ನೀತಿಗಳ ವಿರುದ್ಧ ಆ.20 ರಂದು ‘ಜನಧ್ವನಿ’ ಹೆಸರಿನಲ್ಲಿ ಕಾಂಗ್ರೆಸ್ ಹೋರಾಟಕ್ಕೆ ಕರೆ ನೀಡಿದೆ.
ಸರ್ಕಾರದ ಇತ್ತೀಚಿನ ಜನವಿರೋಧಿ ನೀತಿಗಳು, ಜನ ಮತ್ತು ರೈತರ ವಿರುದ್ಧವಾದ ಕಾನೂನುಗಳ ಜಾರಿ, ನೆರೆ ಹಾನಿ ಅಧ್ಯಯನ ಪ್ರವಾಸ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.