ವಿಶ್ವದ ಮೊದಲ ಕೋವಿಡ್ ಲಸಿಕೆ

11/08/2020

ಮಾಸ್ಕೋ ಆ.11 : ಡಬ್ಲ್ಯುಎಚ್‍ಒ ಸೇರಿದಂತೆ ಹಲವಾರು ಕಡೆಗಳಿಂದ ಸುರಕ್ಷತೆಯ ಬಗೆಗಿನ ಕಾಳಜಿಯ ಹೊರತಾಗಿಯೂ ಅಕ್ಟೋಬರ್‍ನಲ್ಲಿ ಸಮೂಹ ವ್ಯಾಕ್ಸಿನೇಷನ್ (ಮಾಸ್ ವ್ಯಾಕ್ಸಿನೇಷನ್) ಪ್ರಾರಂಭಕ್ಕೆ ಮುನ್ನ ಈ ವಾರ ವಿಶ್ವದ ಮೊದಲ ಕೋವಿಡ್ -19 ಲಸಿಕೆಯನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ರಷ್ಯಾ ಮುಂದುವರಿಸಿದೆ.
ರಷ್ಯಾದ ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್ನೆವ್ ಅವರು ಆ.12 ರಂದು ಕೋವಿಡ್ -19 ಲಸಿಕೆ ನೊಂದಾವಣೆ ಯೋಜನೆಯನ್ನು ಹೊಂದಿದ್ದಾಗಿ ಹೇಳಿದ್ದಾರೆ. ಕೋವಿಡ್ ನಿಂದ ಅತಿ ಹೆಚ್ಚು ಪೀಡಿತವಾದ ಜಗತ್ತಿನ ನಾಲ್ಕನೇ ರಾಷ್ಟ್ರ ರಷ್ಯಾ ಆಗಿದ್ದು ಯುಎಸ್, ಬ್ರೆಜಿಲ್ ಮತ್ತು ಭಾರತದ ನಂತರದ ಸ್ಥಾನದಲ್ಲಿದೆ,
ಈ ವಾರ ದೇಶವು ವಿಶ್ವದ ಮೊದಕ ಕೋವಿಡ್ ಲಸಿಕೆ ಬಿಡುಗಡೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ನೆರವೇರಿಸಲಿದೆ ಎಂದು ಒಲೆಗ್ ಗ್ರಿಡ್ನೆವ್ ಹೇಳಿರುವುದಾಗಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಗಸ್ಟ್ 3 ರಂದು, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಲ್ಲಿ ಭಾಗವಹಿಸುವವರ “ಅಂತಿಮ ವೈದ್ಯಕೀಯ ಪರೀಕ್ಷೆ” ಬರ್ಡೆಂಕೊ ಮುಖ್ಯ ಮಿಲಿಟರಿ ಕ್ಲಿನಿಕಲ್ ಆಸ್ಪತ್ರೆಯಲ್ಲಿ ನಡೆಯಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವ್ಯಾಕ್ಸಿನೇಷನ್‍ನಿಂದಾಗಿ ಎಲ್ಲಾ ಸ್ವಯಂಸೇವಕರು ಸ್ಪಷ್ಟ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊಂದಿದ್ದಾರೆಂದು ಫಲಿತಾಂಶಗಳು ಸ್ಪಷ್ಟವಾಗಿ ಬಂದಿದೆ, ಸ್ವಯಂಸೇವಕರ ಕೆಲಸದಲ್ಲಿ ಯಾವುದೇ ಅಡ್ಡಪರಿಣಾಮಗಳು ಅಥವಾ ಅಸಹಜತೆ ಕಾಣಿಸಿಲ್ಲ ಎಂದು ಸಚಿವಾಲಯ ಹೇಳಿದೆ.