ಸಾಧಕ ವಿದ್ಯಾರ್ಥಿನಿ ಹೆಚ್.ಸಿ ಗೀತಾ ಗೆ ದಲಿತ ಸಂಘರ್ಷ ಸಮಿತಿಯಿಂದ ದಿನಸಿ ಕಿಟ್ ವಿತರಣೆ

11/08/2020

ಮಡಿಕೇರಿ ಆ. 11 : ಪಿ.ಯು.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಸಾಧನೆಗೈದ ಸಂಪಾಜೆಯ ಹೆಚ್.ಸಿ ಗೀತಾ ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎ.ಪಿ. ದೀಪಕ್ ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸಂಘಟನೆಯ ಪ್ರಮುಖರೊಂದಿಗೆ ಸಾಧಕ ವಿದ್ಯಾರ್ಥಿ ಗೀತಾ ಮನೆಗೆ ಭೇಟಿ ನೀಡಿ ಅಗತ್ಯ ದಿನಸಿ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಡಿ.ಎಸ್.ಎಸ್‍ನ ಜಿಲ್ಲಾ ಸಂಚಾಲಕ ಹೆಚ್.ಎಲ್ ದಿವಾಕರ್, ಪ್ರಸ್ತುತ ದಿನಗಳಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯಿಂದ ಮತ್ತಷ್ಟು ಬಡ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿನಿ ಗೀತಾಗೆ ಸಂಘಟನೆ ವತಿಯಿಂದ ನೆರವು ನೀಡುವುದಾಗಿ ತಿಳಿಸಿದರು.
ಸಂಪಾಜೆಯ ನಿವಾಸಿಯಾದ ಜಾನಕಿಯವರ ಪುತ್ರಿ, ಹೆಚ್.ಸಿ. ಗೀತಾ ಸಂಪಾಜೆಯ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಕಲಾ ವಿಭಾಗದಲ್ಲಿ 600ಕ್ಕೆ 558 (ಶೇಕಡಾ 93) ಅಂಕ ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದು, ಇವರ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಪಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲೋಕನಾಯಕ್, ಕನ್ನಡ ಪ್ರಾಧ್ಯಾಪಕರಾದ ಚೆನ್ನಬಸಪ್ಪ ಪ್ರಮುಖರಾದ ಯತೀನ್ ಚಪ್ಪೇರ ಹಾಜರಿದ್ದರು.