ತಲಕಾವೇರಿಯಲ್ಲಿ ಮಂಗಳವಾರ ನಡೆದ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಮಡಿಕೇರಿ ಆ.11 : ಮಹಾಮಳೆಯಿಂದ ಬೆಟ್ಟ ಕುಸಿದು ಐವರು ನಾಪತ್ತೆಯಾಗಿದ್ದ ತಲಕಾವೇರಿ ಪ್ರದೇಶಲ್ಲಿ ಇಂದು ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಸಿಕ್ಕಿದೆ.
ಪ್ರಕೃತಿ ವಿಕೋಪ ನಿರ್ವಹಣಾ ತಂಡ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಪೆÇಲೀಸ್, ಅರಣ್ಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಡಿದಾದ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದ ಸಂದರ್ಭ ಕೊಳೆತ ಸ್ಥಿತಿಯಲ್ಲಿ ಮೃತ ಶರೀರ ಪತ್ತೆಯಾಗಿದೆ.
ನಾರಾಯಣ ಆಚಾರ್ ಅವರ ಮನೆಯಿದ್ದ ಪ್ರದೇಶದಿಂದ 2.50 ಕಿ.ಮೀ ದೂರದಲ್ಲಿ ಶವ ಮಣ್ಣಿನಡಿ ಗೋಚರಿಸಿದ್ದು, ಜಡಿಮಳೆಯ ನಡುವೆಯೂ ಕಾರ್ಯಾಚರಣೆ ತಂಡ ಕಂದಕದಿಂದ ಶವವನ್ನು ಮೇಲೆ ತರುವಲ್ಲಿ ಯಶಸ್ವಿಯಾಯಿತು.
ಈ ನಡುವೆ ನಾರಾಯಣ ಆಚಾರ್ ಅವರಿಗೆ ಸೇರಿದ ಎರಡು ಕಾರು, ಒಂದು ಬೈಕ್ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಮಣ್ಣಿನಡಿ ಪತ್ತೆಯಾಯಿತಲ್ಲದೆ, ಸಾಕು ನಾಯಿಯ ಮೃತದೇಹ ಕೂಡ ಸಿಕ್ಕಿತು.
ಪ್ರತಿಕೂಲ ಹವಾಗುಣದ ಹಿನ್ನೆಲೆ ಸಂಜೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಧಾರಾಕಾರ ಮಳೆಯೊಂದಿಗೆ ಕೆಸರು ಮಿಶ್ರಿತ ನೀರು ಬೆಟ್ಟದ ಭಾಗದಿಂದ ಹರಿದು ಬರುತ್ತಿದ್ದುದರಿಂದ ಕಾರ್ಯಾಚರಣೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ಆ.6 ರಂದು ಘಟನೆ ನಡೆದಿದ್ದು, 8 ರಂದು ನಾರಾಯಣ ಆಚಾರ್ ಅವರ ಸೋದರ ಆನಂದತೀರ್ಥಸ್ವಾಮಿಗಳ ಮೃತದೇಹ ಸಿಕ್ಕಿತ್ತು. ನಾಪತ್ತೆಯಾದ ಐವರಲ್ಲಿ ಇಬ್ಬರ ಶವ ದೊರೆತಂತ್ತಾಗಿದ್ದು, ಪತ್ನಿ ಶಾಂತ, ಸಹಾಯಕ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ ಅವರುಗಳ ಪತ್ತೆ ಕಾರ್ಯ ಬುಧವಾರ ಮತ್ತೆ ಮುಂದುವರೆಯಲಿದೆ.
ನಾರಾಯಣ ಆಚಾರ್ ಹಾಗೂ ಪತ್ನಿ ಶಾಂತ ಅವರುಗಳು ಮನೆಯ ಮೇಲಂತಸ್ತಿನಲ್ಲಿ ನಿದ್ರಿಸಿದ್ದರು. ಈ ಕಾರಣದಿಂದಲೇ ಬೆಟ್ಟ ಬಿದ್ದ ರಭಸಕ್ಕೆ ಎರಡೂವರೆ ಕಿ.ಮೀ ನಷ್ಟು ದೂರ ದೇಹ ಹಾರಿ ಹೋಗಿದೆ ಎಂದು ಹೇಳಲಾಗುತ್ತಿದೆ.